ಜಿಲ್ಲೆ

ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ

ಬಳ್ಳಾರಿ : ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.

ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ಜಿಪಂ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಪಂ ಸಹಯೋಗದೊಂದಿಗೆ ಸೆ.17ರಿಂದ ಅ.02ರವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಹೀ ಸೇವಾ ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ, ಜಲಮೂಲಗಳ ಸುತ್ತ ಸ್ವಚ್ಛತೆ ಕಾಯ್ದುಕೊಳ್ಳುವಿಕೆ ಕುರಿತು ನಾನಾ ಚಟುವಟಿಕೆ ಕೈಗೊಂಡಿದ್ದು , ಸಾರ್ವಜನಿಕರು ಸಹ ಕೈಜೋಡಿಸಬೇಕು. ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಅರಿವು ಹೊಂದಬೇಕು. ಇದರಿಂದ ಯಾವುದೇ ರೋಗ-ರುಜಿನಗಳು ಹರಡುವುದಿಲ್ಲ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರತಿ ನಿತ್ಯ ಮನೆಯ ಹಂತದಲ್ಲಿ ಕಸ ಸಂಗ್ರಹಣೆ ಮತ್ತು ಇದನ್ನು ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಲು ಪ್ರಾಯೋಗಿಕವಾಗಿ ಮೋಕ ಮತ್ತು ಕಪ್ಪಗಲ್ ಪಂಚಾಯಿತಿಗಳಲ್ಲಿ ಕಸದ ಕ್ಯೂಆರ್‌ಕೋಡ್ ಆ್ಯಪ್ ಬಿಡುಗಡೆಗೊಳಿಸಲಾಗಿದೆ.

ಈ ಕ್ಯೂಆರ್ ಕೋಡ್ ಪ್ರತಿ ನಿತ್ಯ ಸ್ಕಾೃನ್ ಮಾಡಿದ ವೇಳೆ ವಾರ್ಡವಾರು ವಾಹನ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುವ ಕುರಿತು ಪರಿಶೀಲನೆ ನಡೆಸಲು ಅನುಕೂಲವಾಗಲಿದೆ. ಪ್ರಾಯೋಗಿಕ ಹಂತದ ಈ ಗ್ರಾಪಂ ಯಶಸ್ವಿಯಾದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ಕಸ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲು ಕ್ರಮ ವಹಿಸಲಾಗುವುದು ಎಂದರು. ಬಳಿಕ ಕೋಡ್ ಆ್ಯಪ್ ಹಾಗೂ ಸ್ಚಚ್ಛತಾ ಕಾರ್ಯದ ಕುರಿತು ಮಾಹಿತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು.