ಬಳ್ಳಾರಿ : ಮಕ್ಕಳು ದಿನಾಲೂ ಶಾಲೆಗೆ ಬರಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ತಪ್ಪಿಸದೆ ಕಲಿಕೆಗೆ ಆಸಕ್ತಿ ವಹಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಪಟೇಲ್‌ನಗರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ, ಏಳನೇ ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮನೆಯಲ್ಲಿ ಶಾಲೆಗೆ ಹೋಗಲು ಅಡ್ಡಿಪಡಿಸಿದರೆ, ನಾನು ತಪ್ಪದೇ ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಆರೋಗ್ಯದಿಂದಿರಬೇಕು. ಶಿಕ್ಷಣ ಪಡೆದುಕೊಂಡು ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.
ಬಳಿಕ ಸಚಿವರು ಶಾಲೆಯ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು. ಊಟದಲ್ಲಿ ಅನ್ನ, ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಮೊಟ್ಟೆ ನೀಡಲಾಗಿತ್ತು. ಇದೇ ವೇಳೆ ಊಟದ ರುಚಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು.