ಜಿಲ್ಲೆ

ಉಪ ಚುನಾವಣೆಗೆ ಸಹೋದರರ ಸವಾಲ್

ಬಳ್ಳಾರಿ : ಸಂಡೂರು ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಗೆ ಒಂದಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿಯಾಗಿದ್ದು, ಮತ್ತೊಂದಡೆ ಕ್ಷೇತ್ರವನ್ನು ಗೆಲ್ಲಲೇಬೇಕು ಎಂಬ ಹಠ ಸಹೋದರರ ನಡುವೆ ಸವಾಲ್‌ಯಾಗಿ ಪರಿಣಮಿಸಿದೆ.

ಕಾಂಗ್ರೆಸ್‌ನಿಂದ ಕಾರ್ಮಿಕ ಸಚಿವ ಸಂತೋಷ ಲಾಡ್ ಬೆಂಬಲಿತ ಈ.ಅನ್ನಪೂರ್ಣಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಕಣಕ್ಕೆ ಇಳಿಸಲಾಗಿದೆ. ಈಗಾಗಲೇ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂಬುದಾಗಿ ಕಾರ್ಯಕರ್ತರಿಗೆ ಸಭೆಯಲ್ಲಿ ಸೂಚಿಸಿದ್ದಾರೆ. ಸಂತೋಷ ಲಾಡ್ ಕಾಂಗ್ರೆಸ್ ಅಭ್ಯರ್ಥಿ ಪರ, ಇತ್ತ ಅನಿಲ್‌ಲಾಡ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗುವುದರಿಂದ ಈ ಉಪಚುನಾವಣೆಯ ಕದನ ಸಹೋದರರ ನಡುವೆ ರಂಗರೇಲಿದೆ.

ಮೂರು ಪಕ್ಷಗಳಲ್ಲಿ ಸ್ಪರ್ಧಿಸಿದ ಲಾಡ್ : 2004 ರಲ್ಲಿ ಅಖಂಡ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 17 ಸಾವಿರ ಮತಗಳ ಅಂತರದಿಂದ ಅನಿಲ್ ಲಾಡ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಕೂಡ್ಲಿಗಿ ಎಸ್ಟಿ ಮೀಸಲು ಕ್ಷೇತ್ರವಾಯಿತು. ಬಳಿಕ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡು 2008ರಲ್ಲಿ ಬಳ್ಳಾರಿ ನಗರದಿಂದ ರೆಡ್ಡಿ ಸಹೋದರರಿಗೆ ಸೆಡ್ಡು ಹೊಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರು. ಬಳಿಕ 2013ರಲ್ಲಿ ಮಾಜಿ ಸಚಿವ ಶ್ರೀರಾಮುಲು ಕಟ್ಟಿದ ಬಿಎಸ್‌ಆರ್ ಪಕ್ಷ , ಬಿಜೆಪಿ ಹಾಗೂ ಕಾಂಗ್ರೆಸ್ ತ್ರಿಕೋನ ಸ್ಪರ್ಧೆಯಿಂದ ಮತ ವಿಭಜನೆಯಾಗಿ ಬಳ್ಳಾರಿ ನಗರದಿಂದ ಲಾಡ್ ಎರಡನೇ ಬಾರಿ ಗೆಲುವು ಸಾಧಿಸಿದರು. 2018ರಲ್ಲಿ ಸ್ಥಳಿಯ ಆಡಳಿತ ವಿರೋಧ ಅಲೆಯಿಂದ ಬಿಜೆಪಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತರು. 2023ರಲ್ಲಿ ಮತ್ತೋಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯತ್ನಿಸಿದರು ಟಿಕೆಟ್ ಸಿಗದೆ ಕಾರಣದಿಂದ ಕೊನೆಯ ಘಳಿಗೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜಿಗಿದು ನಗರಕ್ಕೆ ಸ್ಪರ್ಧಿಸಿ ಸೋತರು. ಒಟ್ಟಾರೆ ಅವಳಿ ಜಿಲ್ಲೆಯಲ್ಲಿ ಕಳೆದ ಎರಡು ದಶಕದಲ್ಲಿ ಮೂರು ರಾಜಕೀಯ ಪಕ್ಷಗಳೊಂದಿಗೆ ಸ್ಪರ್ಧಿಸಿ ಗೆದ್ದು ಸೋತರು ಎಂಬ ಕೀರ್ತಿ ಅನಿಲ್ ಲಾಡ್‌ಗೆ ಇದೆ. 2004ರಲ್ಲಿ ಸಂತೋಷ ಲಾಡ್ ಜೆಡಿಎಸ್‌ನಿಂದ ಮೊದಲ ಬಾರಿ ಸಂಡೂರು ಕ್ಷೇತ್ರ ಗೆದ್ದಿದ್ದು ಬಿಟ್ಟರೆ 2008 ರಿಂದ 2023 ರವರೆಗೆ ಕಾಂಗ್ರೆಸ್‌ನಿಂದ ಧಾರವಾಡ ಕಲಘಟಗಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇಬ್ಬರು ಸಹೋದರರು ಒಂದೇ ಬಾರಿ ರಾಜಕಾರಣ ಆರಂಭಿಸಿದರು ನೇರವಾಗಿ ಎದುರಾಳಿಯಾಗಿಲ್ಲ. ಆದರೆ, ಮೊದಲ ಬಾರಿ ಸಹೋದರರು ಇಬ್ಬರು ಅವರ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಷ್ಟರ ಮಟ್ಟಿಗೆ ಕಾದಡಲಿದ್ದಾರೆ ಎಂಬುದು ನೋಡಬೇಕಿದೆ. ಅಲ್ಲದೆ, ಕ್ಷೇತ್ರದಲ್ಲಿ ಹಲವು ಚುನಾವಣೆಗಳಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಆದರೆ, ಜೆಡಿಎಸ್ ಒಂದು ಬಾರಿ ಕ್ಷೇತ್ರದಲ್ಲಿ ಗೆದ್ದು ಕಾರ್ಯಕರ್ತರು ಇರುವುದನ್ನು ಗುರುತಿಸಿಕೊಂಡಿದೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಮತಗಳು ಕೈ ಹಿಡಿದರೆ ಮಾತ್ರ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ.

ಒಂದಾದ ರೆಡ್ಡಿ , ಲಾಡ್ : ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ರೆಡ್ಡಿ ಸಹೋದರರ ವಿರುದ್ಧ ಕೆಲ ನಾಯಕರು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದರು. ಅಂತಹ ವೇಳೆಯಲ್ಲಿ 2008ರಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ರೆಡ್ಡಿ ಸಹೋದರರಿಗೆ ಸೆಡ್ಡು ಹೊಡೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ, ಪ್ರತ್ಯಾರೋಪ ಹಾಗೂ ಮನೆಗಳ ಮೇಲೆ ದಾಳಿ ನಡೆದು ಮಾಜಿ ಸಚಿವ ಜನಾರ್ದನರೆಡ್ಡಿ ಹಾಗೂ ಲಾಡ್ ನಡುವೆ ವೈ ಮನಸ್ಸು ಕೂಡ ಬೆಳೆದಿತ್ತು. ಇತ್ತೀಚೆಗೆ ಸಂಡೂರಿನಲ್ಲಿ ಲಾಡ್‌ಹಾಗೂ ರೆಡ್ಡಿ ಬಹಿರಂಗ ಸಭೆಯಲ್ಲಿ ಒಂದಾಗುವ ಮೂಲಕ ಹಲವು ವರ್ಷಗಳ ಇದ್ದ ಕೋಪ ತಣ್ಣಗಾಗಿದೆ. ಆದರೆ, ಹಲವು ವರ್ಷಗಳಿಂದ ಪ್ರೀತಿ ಸಲುಗೆಯಿಂದ ಇದ್ದ ಸಹೋದರರ ನಡುವೆ ಶಮನ ಆರಂಭವಾಗಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.