ಬಳ್ಳಾರಿ : ಜಿಲ್ಲಾಡಳಿತದಿಂದ ನ. 1 ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ಸರ್ಕಾರಿ ಮಾಜಿ ಪುರಸಭೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಧ್ವಜಾರೋಹಣ ನೆರವೇರಿಸಲಿದ್ದು, ಸಕಲ ಸಿದ್ಧತೆಕೈಗೊಳ್ಳಬೇಕು ಎಂದು ಸೂಚಿಸಿದರು.
ವೇದಿಕೆ ಸಿದ್ದತೆ, ಆಹ್ವಾನ ಪತ್ರಿಕೆ ಮುದ್ರಣ, ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಿ ಸೂಕ್ತ ಪೋಲಿಸ್ ಬಂದೋಬಸ್ತ್ ಕಲ್ಪಿಸಬೇಕು. ಕಾರ್ಯಕ್ರಮ ದಿನದಂದು ಹಂಪಿಯಿಂದ ಕನ್ನಡ ಜ್ಯೋತಿ ದೀಪ ತರಲಾಗುತ್ತಿದೆ. ಬಳಿಕ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಾನಾ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು. ವಿದ್ಯುತ್ ಅವಘಡ ಸಂಭವಿಸಿದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನಿಸಲಾಗುವುದು. ನಗರದ ನಗರದಲ್ಲಿ ಸ್ವಚ್ಛತೆ, ಪ್ರಮುಖ ವೃತ್ತ ಮತ್ತು ರಸ್ತೆಗಳನ್ನು ದೀಪಾಲಂಕಾರದಿಂದ ಅಲಂಕೃತಗೊಳಿಸಬೇಕು. ನವೆಂಬರ್ ತಿಂಗಳ ಮೊದಲ ಒಂದು ವಾರ ಜಿಲ್ಲೆಯ ಎಲ್ಲ ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದರು.
ಜಿಲ್ಲೆಗೆ ಈ ಬಾರಿ ಆಯೋಜಿಸಲಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಸ್ವಾಗತಿಸಲು, ನಾನಾ ಶಾಲಾ-ಕಾಲೇಜು 1 ಲಕ್ಷ ವಿದ್ಯಾರ್ಥಿಗಳ ಮೂಲಕ ನಾಡಗೀತೆ ಹೇಳುವ ಮೂಲಕ ಕನ್ನಡದ ಕಲರವ ಮೊಳಗಬೇಕು. ರಾಜ್ಯೋತ್ಸವದ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಭಾಷಣ, ಪ್ರಬಂಧ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ನಾನಾ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.