ಜಿಲ್ಲೆ

ಅಪರಾಧ ಕೃತ್ಯ ಪತ್ತೆಗೆ ಸಿಸಿಕ್ಯಾಮೆರಾ ಅನುಕೂಲ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ರಾಜ್ಯದಲ್ಲಿ ದಿನೇ ದಿನೇ ದರೋಡೆ ಹಾಗೂ ಎಟಿಎಂ ಕಳವು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲೇ ನಗರದಲ್ಲಿ ಮೂರು ಸಾವಿರಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಜಾಗೃತಿ ವಹಿಸಿದ್ದಾರೆ.

ನಗರವೂ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಬೆಳೆಯುತ್ತಿದ್ದು, ಹೊಸ ಹೊಸ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ಜಿಲ್ಲೆಯ ಎಲ್ಲ ಠಾಣಾಗಳ ಸಿಬ್ಬಂದಿಯಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳು ಹರಸಾಹಸ ಪಡಬೇಕಾಗುತ್ತದೆ. ಆದ್ದರಿಂದ, ನಗರದ ಸೂಕ್ಷ್ಮ ಪ್ರದೇಶ ಹಾಗೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುವ ವೃತ್ತಗಳಲ್ಲಿ ಪೊಲೀಸ್ ಇಲಾಖೆಯು ಸಿಸಿಟಿವಿ ಅಳವಡಿಸಿದ್ದು ಹಾಗೂ ಬಹುತೇಕ ಮನೆಗಳಲ್ಲಿ ಸಿಸಿ ಟಿವಿ ಅಳವಡಿಸುವಂತೆ ಅಧಿಕಾರಿಗಳು ಅರಿವು ಮೂಡಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಇಲ್ಲಿನ ಜನಬೀಡ ವೃತ್ತಗಳಾದ ಸುಧಾಕ್ರಾಸ್, ಮೋತಿ ವೃತ್ತ, ದುರ್ಗಮ್ಮ ಗುಡಿ ವೃತ್ತ, ಸಂಗಮ್ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಕೌಲಬಜಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸದಾಕಾಲ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಈ ಪ್ರದೇಶಗಳಲ್ಲಿ ಯಾವುದಾದರೂ ಅಪಘಾತ, ದರೋಡೆ ಹಾಗೂ ಕಳವು ಪ್ರಕರಣಗಳು ಕಂಡು ಬಂದರೆ ಸುತ್ತಲಿನ ಪ್ರದೇಶಗಳಲ್ಲಿ ಇಲಾಖೆಯಿಂದ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಬಹುಬೇಗ ಪ್ರಕರಣ ಬೇಧಿಸಲು ಅನುಕೂಲವಾಗಿದೆ.

ಪೊಲೀಸ್ ಇಲಾಖೆಯಿಂದ ನಗರದ ವೃತ್ತಗಳಲ್ಲಿ 118, ಪೊಲೀಸ್ ಠಾಣೆಗಳಲ್ಲಿ 80 ಹಾಗೂ ಸಾರ್ವಜನಿಕರ ಮನೆಗಳಲ್ಲಿ 3,330 ಸೇರಿದಂತೆ ಒಟ್ಟು 3,528 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವೃತ್ತ ಹಾಗೂ ಠಾಣೆಗಳಲ್ಲಿ ಅಳವಡಿಸಿರುವ ಎಲ್ಲ ಸಿಸಿ ಕ್ಯಾಮೆರಾಗಳಿಗೆ ಎಸ್ಪಿ ಕಚೇರಿಯ ಬೃಹತ್ ಎಲ್‌ಇಡಿ ಪರದೆಯಲ್ಲಿ ವೀಕ್ಷಿಸಬಹುದು. ಸಾರ್ವಜನಿಕರು ಅಳವಡಿಸಿರುವ ಮನೆಗಳಲ್ಲಿಯೇ ಟಿವಿಗಳನ್ನು ಅಳವಡಿಸಿಕೊಂಡಿದ್ದು ಸದ್ಯ ಕಳ್ಳತನ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬುದು ಅಭಿಪ್ರಾಯವಾಗಿದೆ.

ಪತ್ತೆ ಹಚ್ಚಿದ ಪ್ರಮುಖ ಪ್ರಕರಣಗಳು : ಕೆಲ ದಿನಗಳ ಹಿಂದೆ ಇಲ್ಲಿನ ಮೋತಿ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನೊಬ್ಬ ರಸ್ತೆಬದಿ ಸಂಚಾರಿಸುತ್ತಿದ್ದ ವ್ಯಕ್ತಿಗೆ ಬಸ್‌ನಿಂದ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದನು. ಆರಂಭದಲ್ಲೇ ಬಸ್ ಚಾಲಕ ನನ್ನದು ತಪ್ಪಿಲ್ಲ ಎಂಬುದಾಗಿ ವಾದಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಆ ಪ್ರದೇಶದಲ್ಲಿದ್ದ ಸಿಸಿಟಿವಿಯಲ್ಲಿ ವೀಕ್ಷಿಸಿದ ವೇಳೆ ಬಸ್‌ಚಾಲಕನದು ತಪ್ಪು ಎಂಬುದು ತಿಳಿದಿದ್ದು, ಇಲಾಖೆಯಿಂದ ಮೃತ ಕುಟುಂಬಕ್ಕೆ ಪರಿಹಾರ ಒದಗಿಸಲಾಯಿತು. ಅಲ್ಲದೆ, ಕೆಲ ದಿನಗಳ ಹಿಂದೆ ಸತ್ಯನಾರಯಣ ಪೇಟೆಯಲ್ಲಿ ಬೆಳ್ಳಂ ಬೆಳಗ್ಗೆ ವೈದ್ಯರೊಬ್ಬರನ್ನು ಅಪಹರಣಗೊಳಿಸದ ವೇಳೆ ಪೊಲೀಸರಿಗೆ ಪ್ರಕರಣ ಬೇಧಿಸಲು ಆಧಾರವಾಗಿದ್ದೆ ಆ ಬೀದಿಯಲ್ಲಿದ್ದ ಸಿಸಿ ಕ್ಯಾಮೆರಾ. ಆರೋಪಿಗಳು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂಬುದಾಗಿ ತಿಳಿಯಿತು. ಕೂಡಲೇ ಎಲ್ಲ ಜಿಲ್ಲೆಯಿಂದ ಹೊರ ಸಂಚಾರಿಸುವ ಎಲ್ಲ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದರಿಂದ ಆ ದಿನ ರಾತ್ರಿಯೇ ಅಪಹರಣಕಾರರು ವೈದ್ಯರನ್ನು ಬಿಟ್ಟು ಹೋದರು. ಇದರಂತೆ ಬೈಕ್ ಕಳವು, ಮನೆಗಳ್ಳತನ ಸೇರಿದಂತೆ ಅನೇಕ ಪ್ರಕರಣಗಳು ಬೇಧಿಸಲು ಪೊಲೀಸರಿಗೆ ದೊರೆಯುವ ಮೊದಲ ಅಸ್ತ್ರವೇ ಸದ್ಯ ಸಿಸಿ ಕ್ಯಾಮೆರಾಗಳು ಆಗಿವೆ. ಆದ್ದರಿಂದ, ಹೊಸ ಹೊಸ ಲೇಔಟ್‌ಗಳಲ್ಲಿ ಒಂಟಿಯಾಗಿರುವ ಮನೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳು ಅಳವಡಿಸುವುದರಿಂದ ಸುಲಭವಾಗಿ ಆರೋಪಿಗಳನ್ನು ಪತ್ತೆ ಹಚ್ಚಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಠಾಣೆಗಳಲ್ಲಿಯೂ ಅಳವಡಿಕೆ : ಜಿಲ್ಲೆಯ ಐದು ತಾಲೂಕು ಪೊಲೀಸ್ ಠಾಣೆಗಳಲ್ಲಿ 80 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಠಾಣೆಗಳಿಗೆ ದೂರು ಸಲ್ಲಿಸಲು ಆಗಮಿಸುವ ಸಾರ್ವಜನಿಕರ ಜತೆ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಹಿರಿಯ ಅಧಿಕಾರಿಗಳು ವೀಕ್ಷಿಸುತ್ತಾರೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ಠಾಣೆಗೆ ಆಗಮನ, ನಿರ್ಗಮನ ಹಾಗೂ ಬಂಧನದ ಆರೋಪಿಗಳೊಂದಿಗೆ ವರ್ತನೆ ಬಗ್ಗೆ ಸಹಾಯಕವಾಗಿದೆ.

ಕೋಟ್... ನಗರದಲ್ಲಿ ಅಗತ್ಯವಿರುವ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ವಾಸಿಸುವ ಸಾರ್ವಜನಿಕರು ಕೂಡ ಸಿಸಿ ಕ್ಯಾಮೆರಾಗಳನ್ನು ಹಾಕಿಸಿಕೊಳ್ಳಬೇಕು ಎಂಬುದು ಅಭಿಪ್ರಾಯ. ಸಿಸಿ ಕ್ಯಾಮೆರಾಗಳಿಂದ ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.

- ಡಾ.ವಿ.ಜೆ.ಶೋಭಾರಾಣಿ, ಎಸ್ಪಿ, ಬಳ್ಳಾರಿ.