ಜಿಲ್ಲೆ

ಬಿಮ್ಸ್ ನಿರ್ದೇಶಕ ಅಮಾನತುಗೊಳಿಸಿ

ಬಳ್ಳಾರಿ : ಜಿಲ್ಲೆಯ ಬಿಮ್ಸ್‌ನಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿಲ್ಲ, ಹೀಗಾಗಿ ತಕ್ಷಣ ಬಿಮ್ಸ್ ನಿರ್ದೇಶಕರನ್ನು ಅಮಾನತುಗೊಳಿಸಬೇಕು ಎಂದು ಶಾಸಕ ನಾರಾಭರತರೆಡ್ಡಿ ಆಗ್ರಹಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಚರ್ಚೆಯ ವೇಳೆ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಿಗೆ ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಕೇಳಲಾದ ಪ್ರಶ್ನೆಗೆ ನೀಡಲಾದ ಉತ್ತರಕ್ಕೆ ಸಂಬಂಧಿಸಿ ಮಾತನನಾಡಿದರು. ಬಿಮ್ಸ್‌ನಲ್ಲಿ ಆರೋಗ್ಯ ಬದಲಾಗಿ ಹಾಡು ಹಗಲೇ ಜನರ ಕಗ್ಗೂಲೆ ನಡೆಯುತ್ತಿದೆ. ಇಲ್ಲಿನ ಅವ್ಯವಹಾರ ಬಗ್ಗೆ ಕ್ರಮಕೈಗೊಳ್ಳಲು ತನಿಖೆ ತಂಡ ರಚಿಸಬೇಕು ಎಂದರು.

ಕಳೆದ ಹಲವು ವರ್ಷಗಳಿಂದ ಪೂರ್ಣಾವಧಿ ಕೆಲಸ ಮಾಡುತ್ತಿದ್ದ ಸಮರ್ಥರನ್ನು ತೆಗೆದು ಹಾಕಿ, ತಾತ್ಕಾಲಿಕ ನೇಮಕ ಮಾಡಿ, ಕೆಲವರು ಒಂದು ಗುಂಪು ಮಾಡಿಕೊಂಡು, ಹಣ ಗಳಿಸುತ್ತ, ಬಿಮ್ಸ್ ಅನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ್ದಾರೆ, ನಾನು ನನ್ನ ಕುಟುಂಬದವರನ್ನು ಕೂಡ ಅಲ್ಲಿಗೆ ಚಿಕಿತ್ಸೆಗಾಗಿ ಕರೆದೊಯ್ಯಲು ಭಯಪಡುವ ಸ್ಥಿತಿ ಇದೆ ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಎಲ್ಲ ಇದ್ದೂ ಬಡ ಜನರ ಪ್ರಾಣ ಉಳಿಸಲು ಸಾಧ್ಯ ಆಗದಿರುವ ಬಗ್ಗೆ ನನ್ನಲ್ಲಿ ಅಸಹಾಯಕ ಭಾವನೆ ಮೂಡಿತು ಎಂದು ಬೇಸರ ವ್ಯಕ್ತಪಡಿಸಿದರು. ಬಿಮ್ಸ್ ಅಸ್ಪತ್ರೆಯ ರೋಗಿಗಳ ಔಷಧಕ್ಕಾಗಿ ವಾರ್ಷಿಕ 20 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ, ಆದರೆ ಅಲ್ಲಿನ ರೋಗಿಗಳಿಗೆ ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆಯಲಾಗುತ್ತಿದೆ, ಆಸ್ಪತ್ರೆಗೆ ಭೇಟಿ ನೀಡಿದ ವೇಳೆ 20 ಜನರನ್ನು ಮಾತಾಡಿಸಿದೆ, ಸಾವಿರಾರು ರೂ.ಗಳ ಔಷಧಿ ಹೊರಗಿನಿಂದ ತರುವಂತೆ ಹೇಳುತ್ತಾರೆಂದು ರೋಗಿಗಳ ಸಂಬಂಧಿಗಳು ಅಳಲು ತೊಡಿಕೊಂಡರು ಎಂದು ಸದನಕ್ಕೆ ದಾಖಲೆ ಪ್ರದರ್ಶಿಸಿದರು.

ಬಳಿಕ ಶಾಸಕರಿಗೆ ಪ್ರಶ್ನೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಈಗಾಗಲೇ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ, ಹಲವರ ಮೇಲೆ ಕ್ರಮ ಕೈಗೊಳ್ಳಲು ನೊಟೀಸ್ ನೀಡಲಾಗಿದೆ ಎಂದರು.