ಬಳ್ಳಾರಿ: ನೂತನ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಅವಳಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು.
ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳತ್ತ ಸಾಗಿದರು. ವಾಹನ ಸಂಚಾರ ಸುಗಮವಾಗಿತ್ತು. ಆದರೆ, ಚಿತ್ರಮಂದಿರಗಳು ಮುಚ್ಚಿದ್ದವು. ಬೆಳಗ್ಗೆ 10 ಗಂಟೆ ನಂತರ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ನಂತರ ರಾಯಲ್ ವೃತ್ತದಲ್ಲಿ ಸೇರಿದ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರು ಎತ್ತಿನಬಂಡಿಯಲ್ಲಿ ಆಗಮಿಸಿ ಬಂದ್‌ಗೆ ಸಾಥ್ ನೀಡಿದರು. ರೈತ ಸಂಘ, ಆರ್‌ಕೆಎಸ್, ಎಐಯುಟಿಯುಸಿ ಸೇರಿದಂತೆ 15ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿವಹಿಸಿದ್ದವು. ರಾಯಲ್ ವೃತ್ತದ ಬಳಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್ ಮಾತನಾಡಿ, ದೆಹಲಿಯ ಗಡಿ ಭಾಗಗಳಲ್ಲಿ 10 ತಿಂಗಳಿನಿಂದ ಲಕ್ಷಾಂತರ ರೈತರು, ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ 600ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ, ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಕಾರ್ಪೋರೇಟ್‌ಗಳ ಹಿತಾಸಕ್ತಿ ಕಾಪಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಸಂಗನಕಲ್ಲು ಕೃಷ್ಣಪ್ಪ, ಲೇಪಾಕ್ಷಿ, ಹನುಮಂತಪ್ಪ, ರಾಧಾಕೃಷ್ಣ ಉಪಾಧ್ಯ, ನಾಗಭೂಷಣ್, ಎ.ದೇವದಾಸ್, ಸತ್ಯಬಾಬು, ಇಸ್ಮಾಯಿಲ್, ಚಂದ್ರಕುಮಾರಿ, ಎಂ.ಎನ್.ಮಂಜುಳಾ, ಜಗದೀಶ್ ನೇಮಕಲ್, ಎರ‌್ರಿಸ್ವಾಮಿ, ಕಟ್ಟೆಬಸಪ್ಪ, ಜೆ.ಸೌಮ್ಯಾ ಇತರರಿದ್ದರು.