ಜಿಲ್ಲೆ

14 ತಿಂಗಳಿಂದ ಬಳ್ಳಾರಿಯಲ್ಲಿದ್ದೇನೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿಕೆ

ಬಳ್ಳಾರಿ: ನನ್ನ ವಿರುದ್ಧ ಕೇಸ್ ದಾಖಲಾಗಿ 11 ವರ್ಷಗಳಾಗಿವೆ. ಈವರೆಗೆ ನ್ಯಾಯಾಲಯದಲ್ಲಿ ಕೇಸ್ ಸರಿಯಾಗಿ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು (ಸಿಬಿಐ) ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಿ, ನನಗೆ ಪದೇಪದೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಆರೋಪಿಸಿದರು. ನಗರದಲ್ಲಿ ಕನಕ ದುರ್ಗಮ್ಮಗೆ ಸೋಮವಾರ ಪೂಜೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧಿಸಿ, ಜಾಮೀನಿನ ಮೇಲೆ ಹೊರಗೆ ಬಂದ ಮೇಲೆ ಬಳ್ಳಾರಿಯಲ್ಲಿ ಇರಲು ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಈ ವಿಷಯ ಹಿಡಿದು ಸಿಬಿಐ ಅಧಿಕಾರಿಗಳು ಸದಾ ಆಕ್ಷೇಪ ಮಾಡುತ್ತಲೇ ಇದ್ದಾರೆ. ಅದಕ್ಕೆ ನ್ಯಾಯಾಲಯ ಈವರೆಗೆ ಮಾನ್ಯತೆ ನೀಡಿಲ್ಲ. ಸಿಬಿಐನವರು ತಪ್ಪಾಗಿ ಒಂದು ಕೇಸನ್ನು ನನ್ನ ವಿರುದ್ಧ ಹಾಕಿದ್ದಾರೆ. ಹೀಗಾಗಿ, ಆ ಕೇಸ್‌ನಲ್ಲಿ ಸೋಲುವ ಭಯಕ್ಕೆ ನಿರಂತರವಾಗಿ ಕೇಸನ್ನು ನಡೆಸುವುದಕ್ಕೆ ಹಿಂದೇಟು ಹಾಕಿ ವಿಳಂಬ ಮಾಡುತ್ತಿದ್ದಾರೆ. ನಾನು ಪ್ರತಿ ದಿನ ಟ್ರಯಲ್ ನಡೆಸುವಂತೆ ಕೊರ್ಟ್‌ಗೆ ಕೇಳಿದ್ದೇನೆ. ಮೂರ್ನಾಲ್ಕು ತಿಂಗಳಲ್ಲೇ ಕೇಸ್ ಇತ್ಯರ್ಥ ಮಾಡಿ ಎಂದು ಕೇಳಿದ್ದೇನೆ. ಕಳೆದ 14 ತಿಂಗಳಿಂದ ಬಹುತೇಕ ಬಳ್ಳಾರಿ ಮನೆಯಲ್ಲೇ ಇರುವೆ. ಸಮಯ ಬಂದಾಗ ಹೊರಗಡೆ ಬರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕೀಯಕ್ಕೆ ಬರುವ ಇಂಗಿತ
ಮಗಳ ಮದುವೆ ಆಯಿತು. ಇಬ್ಬರು ಮೊಮ್ಮಕಳಾದರು. ಮಗ ಡಿಗ್ರಿ ಮುಗಿಸಿ ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳುತ್ತಿದ್ದಾನೆ. ನನ್ನ ಕೊನೆ ಉಸಿರು ಇರುವವರೆಗೂ ನಾನು ಬಳ್ಳಾರಿಯಲ್ಲಿರಬೇಕು ಎಂದು ಬಯಸಿರುವೆ. ನಾನು ಮತ್ತೆ ರಾಜಕೀಯಕ್ಕೆ ಬರಬೇಕು ಎನ್ನುವ ವಿಚಾರದಲ್ಲಿ ತಾಯಿ ದುರ್ಗಾ ಮಾತೆ ಒಳ್ಳೆ ದಾರಿ ತೋರಿಸುತ್ತಾಳೆ. ಆ ತಾಯಿ ಯಾವ ದಾರಿ ತೋರಿಸುವಳೋ ಅದರಂತೆ ನಡೆಯುವೆ ಎಂದರು.