ಜಿಲ್ಲೆ

ಅವಘಡದ ವೇಳೆ ಕಾರ್ಯ ಪೃವತ್ತರಾಗಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲೇ ಆಗ್ನಿ ಹಾಗೂ ಇತರೆ ಅವಘಡಗಳು ಸಂಭವಿಸಿದ ವೇಳೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.

ನಗರದ ಬಿಮ್ಸ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬಿಮ್ಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಅಗ್ನಿ ಅವಘಡ ತಡೆಗಟ್ಟುವಿಕೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಬಿಮ್ಸ್ )ತುರ್ತು ಪರಿಸ್ಥಿತಿ ಸಂದರ್ಭ ಬಂದಾಗ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಒಂದೆಡೆ ಸೇರಲು ಧ್ವನಿವರ್ಧಕ ಅಳವಡಿಸಬೇಕು ಎಂದು ನಿರ್ದೇಶಿಸಿದರು.

ಬರುವ ಸಾರ್ವಜನಿಕರಿಗೆ ಎಲ್ಲ ಮಾಹಿತಿಯನ್ನು ಒದಗಿಸುವ ಕಾರ್ಯವಾಗಬೇಕು. ಇದಕ್ಕೆ ಪರ್ಯಾಯವಾಗಿ ಧ್ವನಿವರ್ಧಕಗಳ ಬಳಸಬೇಕು. ಆಸ್ಪತ್ರೆಯಲ್ಲಿ ಯಾವುದೇ ರೀತಿಯ ತತ್‌ಕ್ಷಣ ಬೆಂಕಿಗೆ ನಾಂದಿಯಾಗುವಂತಹ ವಸ್ತುಗಳ ಮೇಲೆ ನಿಗಾವಹಿಸಬೇಕು. ತುರ್ತು ಸಂದರ್ಭದಲ್ಲಿ ಅತ್ಯಂತ ಎಚ್ಚರದಿಂದಿರಬೇಕು ಎಂದು ಹೇಳಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪಾಟೀಲ್ ಮಾತನಾಡಿ, ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದಲ್ಲಿ ಜಾಗರೂಕರಾಗಿರಬೇಕು. ಬೆಂಕಿ ನಂದಿಸುವ ಸಾಧನಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕು. ಅಗ್ನಿಶಾಮಕ ದಳದವರು 24 ಗಂಟೆಯೂ ಸೇವೆ ನೀಡುತ್ತಾರೆ. ಜನರೂ ಜಾಗೃತರಾಗಿರಬೇಕು ಎಂದು ತಿಳಿಸಿದರು.

ಅಪಘಾತ ಸ್ಥಳದಲ್ಲಿ ನೀರಿನ ಸೌಕರ್ಯವಿಲ್ಲದಿದ್ದರೆ ಬೆಂಕಿಯನ್ನಾರಿಸುವುದು ಕಷ್ಟ. ಇಂಥ ಸನ್ನಿವೇಶಗಳಲ್ಲಿ ಆಧುನಿಕ ರೀತಿಯಲ್ಲಿ ತಯಾರಿಸಲಾಗಿರುವ ಬೆಂಕಿ ಆರಿಸುವ ಸಾಧನಗಳನ್ನು ಉಪಯೋಗಿಸಲಾಗುತ್ತದೆ. ಹಾಗಾಗಿ ಸಾರ್ವಜನಿಕರು ಇವುಗಳ ಸಾಮಾನ್ಯ ಮಾಹಿತಿಯೂ ಹೊಂದಬೇಕು ಎಂದು ತಿಳಿಸಿದರು.

ಬಳಿಕ ವಿವಿಧ ಬೆಂಕಿ ಆರಿಸುವ ಸಾಧನಗಳನ್ನು ಬಳಸಿ ಬೆಂಕಿ ನಂದಿಸುವ ಕಾರ್ಯದ ಅಣಕು ಪ್ರದರ್ಶಿಸಲಾಯಿತು. ಅಗ್ನಿಶಾಮಕ ಅಧಿಕಾರಿಗಳ ಮತ್ತು ಬಿಮ್ಸ್ ನ ವೈದ್ಯಕೀಯ ಅಧೀಕ್ಷಕಿ ಡಾ.ಇಂಧುಮತಿ ಅವರ ನೇತೃತ್ವದಲ್ಲಿ ಬಿಮ್ಸ್ ತಂಡ ರಚಿಸಿ, ಕುತೂಹಲಕಾರಿಯಾಗಿ ಅಣಕು ಪ್ರದರ್ಶನ ನಡೆಸಲಾಯಿತು. ಅಣಕು ಪ್ರದರ್ಶನದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಲ್ಲಿ ಬಳಸಬಹುದಾದ ಬೆಂಕಿ ನಂದಿಸುವ ಸಾಧನಗಳು, ಅಗ್ನಿ ಸಂಭವಿಸಿದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವುದು, ಪ್ರಥಮ ಚಿಕಿತ್ಸೆ ಹಾಗೂ ಇತರೆ ಕ್ರಮಗಳ ಕುರಿತು ಪರಿಪೂರ್ಣ ಮಾಹಿತಿ ನೀಡಲಾಯಿತು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪರಿಣಿತ ಪರಮೇಶ ಇದ್ದರು.