ಶಾಸಕ ಬಿ.ನಾಗೇಂದ್ರ. 
ಜಿಲ್ಲೆ

ಬಳ್ಳಾರಿ ಬಂದ್‌ಗೆ ಬೆಂಬಲ ಇದೆ, ಪಾಲ್ಗೊಳ್ಳಲ್ಲ ಎಂದ ಶಾಸಕ ಬಿ.ನಾಗೇಂದ್ರ

Ballari

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ನ.26ರಂದು ಕರೆ ನೀಡಲಾಗಿರುವ ಬಳ್ಳಾರಿ ಬಂದ್‌ಗೆ ನನ್ನ ಬೆಂಬಲ ಇದೆ. ಆದರೆ, ನಾನು ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

ನಾನು ಕಾಂಗ್ರೆಸ್ ಶಾಸಕನಾಗಿರುವುದರಿಂದ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರ ಸಲಹೆಯಂತೆ ನಡೆದುಕೊಳ್ಳಬೇಕಾಗುತ್ತದೆ. ಜಿಲ್ಲೆಯ ಐದು ಜನ ಕಾಂಗ್ರೆಸ್ ಶಾಸಕರು ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಬೇಕೆಂದುಕೊಂಡಿದ್ದೇವೆ. ಆದರೆ, ಹಡಗಲಿ, ಹಬೊಹಳ್ಳಿ ಶಾಸಕರು ಭೌಗೋಳಿಕ ಕಾರಣಕ್ಕೆ ಜಿಲ್ಲೆ ವಿಭಜನೆ ಸ್ವಾಗತಿಸಿದ್ದಾರೆ. ಭೌಗೋಳಿಕ, ವಾಣಿಜ್ಯ ಹಾಗೂ ಶೈಕ್ಷಣಿಕ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬುಧವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ದೂರವಾಣಿ ಮೂಲಕ ಮಾತನಾಡಿದ್ದು, ಕ್ಷೇತ್ರದ ಜನರ ಆಶಯದಂತೆ ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದೇನೆ. ವಿಧಾನ ಮಂಡಲ ಅಧಿವೇಶನ ವೇಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಜಿಲ್ಲೆ ವಿಭಜನೆ ವಿಚಾರ ಕೂಡ ಚರ್ಚೆ ಆಗುವ ಸಾಧ್ಯತೆಗಳಿವೆ. ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಕ್ಷೇತ್ರದ ಜನರ ಭಾವನೆಗಳನ್ನು ಕಾಂಗ್ರೆಸ್ ಶಾಸಕಾಂಗ ಸಭೆ ಮತ್ತು ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ಪ್ರತ್ಯೇಕವಾಗಿ ಜಿಲ್ಲೆಯ ಶಾಸಕರ ಅಭಿಪ್ರಾಯ ಕೇಳುವ ನಿರೀಕ್ಷೆ ಇದೆ. ಆಗ ತಮ್ಮ ನಿಲುವು ಸ್ಪಷ್ಟಪಡಿಸುವುದಾಗಿ ಶಾಸಕ ನಾಗೇಂದ್ರ ಹೇಳಿದರು.