ಜಿಲ್ಲೆ

ನುಡಿ ಚಿತ್ರದ ಬರವಣಿಗೆಗೆ ತೆರೆದ ಕಣ್ಣು

ಬಳ್ಳಾರಿ : ನುಡಿ ಚಿತ್ರ ಬುದ್ಧಿ ಭಾವಗಳ ವಿದ್ಯುದಾಲಿಂಗನ. ಇದನ್ನು ಬರೆಯಲು ತೆರೆದ ಕಣ್ಣು, ಮನಸ್ಸು , ಸೂಕ್ಷ್ಮ ಅವಲೋಕನ, ಪೂರ್ವ ತಯಾರಿ ಅತ್ಯಂತ ಅಗತ್ಯ ಎಂದು ಕಾಸರಗೋಡಿನ ಸರ್ಕಾರಿ ಕಾಲೇಜಿನ ಪ್ರೊ.ಡಾ.ಬಾಲಕೃಷ್ಣ ಹೊಸಂಗಡಿ ಹೇಳಿದರು.

ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ನುಡಿ ಚಿತ್ರ ಬರಹ ಸೂತ್ರ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನುಡಿ ಚಿತ್ರಕ್ಕೆ ಮಿತಿಗಳಿಲ್ಲ. ನೀರು, ನೆಲ, ಪರಿಸರ, ಜನಜೀವನ ಎಲ್ಲವೂ ಇಲ್ಲಿ ವಸ್ತುಗಳಾಗುತ್ತವೆ. ನುಡಿ ಚಿತ್ರಕಾರನಿಗೆ ಸೃಜನಶೀಲ ಬರವಣಿಗೆ ಮತ್ತು ರೂಪಕದ ಭಾಷೆ ಬಹಳ ಮುಖ್ಯ. ಆಕರ್ಷಕವಾಗಿ ಬರೆಯುವ ಈ ಬರವಣಿಗೆಯಿಂದ ಓದುಗರಿಗೆ ಸಂತೋಷ, ಮಾಹಿತಿ, ಜ್ಞಾನ ಒಟ್ಟಿಗೆ ಸಿಗುತ್ತದೆ ಎಂದು ವಿಶ್ಲೇಷಿಸಿದರು.

ನಮ್ಮಲ್ಲಿ ಖುಶವಂತ್ ಸಿಂಗ್, ರಸ್ಕಿನ್ ಬಾಂಡ್, ನಾಗೇಶ್ ಹೆಗಡೆ, ಶ್ರೀಪಡ್ರೆ ಮುಂತಾದವರು ನುಡಿ ಚಿತ್ರಗಳ ಮೂಲಕ ಹೆಸರಾದವರು. ಮನಸ್ಸಿನಲ್ಲಿ ತರಂಗಗಳನ್ನು ಎಬ್ಬಿಸುವ, ಅನುಭವಗಳನ್ನು ದಾಖಲಿಸುವ ಈ ಬರವಣಿಗೆಗೆ ಸೂಕ್ತ ಸಿದ್ಧತೆ ಬೇಕು. ಆಗ ಮಾತ್ರ ಸುಲಭವಾಗಿ ನುಡಿ ಸೂತ್ರ ಹಿಡಿಯಲು ಸಾಧ್ಯ ಎಂದರು.

ಪ್ರೊ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ನುಡಿ ಚಿತ್ರಗಳನ್ನು ಹೆಚ್ಚೆಚ್ಚು ಓದಬೇಕು. ಭಾಷೆಯ ಮೇಲೆ ಹಿಡಿತವನ್ನು ಸಾಧಿಸಬೇಕು. ಈ ತೆರನಾದ ಬರವಣಿಗೆ ಮುಂದೆ ಸಂಶೋಧನಾ ಬರವಣಿಗೆಗೂ ಸಹಕಾರಿಯಾಗುತ್ತದೆ ಎಂದರು.