ಬಳ್ಳಾರಿ ; ಇಲ್ಲಿನ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತ ಶಿವರಾತ್ರಿ ಸಂಭ್ರಮ ಸಂಗೀತ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಅನುಭವ ಮಂಟಪ ಮತ್ತು ಅನಂತಪ್ರವಾಹ ಸಂಸ್ಥೆ, ದತ್ತಿ ಇಲಾಖೆಯ ಸಹಯೋಗದಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಮತ್ತು ಎಸ್‌ಕೆಎಂಇ ಪ್ರಾಯೋಜಕತ್ವದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 6.30 ಗಂಟೆಯಿಂದ 9.30 ಗಂಟೆಯವರೆಗೆ ದೇವಸ್ಥಾನದ ಒಳಗೆ ಸಂಗೀತ ಕಾರ್ಯಕ್ರಮ ನಡೆದಿದ್ದು, ಸಂಜೆ 5.30 ಗಂಟೆಯಿಂದ ರಾತ್ರಿ 12.30 ಗಂಟೆವರೆಗೆ ದೇವಸ್ಥಾನ ಆವರಣದ ಬೃಹತ್ ವೇದಿಕೆಯಲ್ಲಿ ನಡೆಯಿತು. ಖ್ಯಾತ ಗಾಯಕರ ಭಕ್ತಿಗೀತೆಗೆಗಳ ಗಾಯನ ಶ್ರೋತೃಗಳನ್ನು ಮಂತ್ರಮುಗ್ದರನ್ನಾಗಿಸಿತು.
ಸಂಗೀತ ಪುರಾಣ ಮುಂತಾದ ಕಾರ್ಯಕ್ರಮಗಳನ್ನು ಸಾವಿರ ವರ್ಷ ಹಳೆಯದಾದ ಕೋಟೆಯ ಮುಂಭಾಗದಲ್ಲಿರುವ ಚಾಲುಕ್ಯರು ನಿರ್ಮಾಣ ಮಾಡಿರುವ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಪ್ರಸ್ತುತ ಪಡಿಸಲಾಯಿತು. ದಿನಪೂರ್ತಿ ಸಂಗೀತ ಕಾರ್ಯಕ್ರಮಗಳು ಮೂಡಿಬಂದವು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ಜೊತೆಗೆ ಭರತನಾಟ್ಯ ನೃತ್ಯ ಜನರ ಮನಸೂರೆಗೊಂಡವು. ಆನಂದ ಪಾಟೀಲ್ ಅವರ ಧ್ಯಾನದ ಸಂಗೀತದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೇಧಾ ಉಡುಪ ಅವರ ಕೊಳಲು ವಾದನ ಗಮನ ಸೆಳೆಯಿತು. ಸಂಧ್ಯಾರಾವ್ ಮತ್ತು ಸ್ಮತಿ ಭಾಸ್ಕರ್ ಅವರ ಕಲಾ ಪ್ರೌಢಿಮೆ ನೆರೆದಿದ್ದವರನ್ನು ಮೈನವಿರೇಳಿಸಿತು. ಅದಿತಿ ಪ್ರಹ್ಲಾದ್, ಆಂಧ್ರದ ಪಂತುಲ ರಾಮ, ಪಂ. ಕುಮಾರ್‌ದಾಸ್ ಅವರ ಹಿಂದೂಸ್ತಾನಿ ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ಕಲಾಕ್ಷೇತ್ರ ಪ್ರತಿಷ್ಠಾನದ ಮಾಜಿ ನಿರ್ದೇಶಕ ರೇವತಿ ರಾಮಚಂದ್ರನ್, ಕೆ.ಆರ್.ಮನಸ್ವಿನಿ ಜತೆಗೂಡಿ ಭರತನಾಟ್ಯ ಪ್ರದರ್ಶಿಸಿದರು. ಡಾ. ಆದಿತ್ಯ ಪಲ್ಲಕ್ಕಿ ಅವರ ಕಾರ್ಯಕ್ರಮ ಮಧ್ಯರಾತ್ರಿ ಆರಂಭವಾಗಿ ನೆರೆದಿದ್ದವರನ್ನು ಶಿವರಾತ್ರಿ ಜಾಗರಣೆಗಾಗಿ ಮಾಡಲಾಯಿತು.