ಜಿಲ್ಲೆ

ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ

ಬಳ್ಳಾರಿ : ನಗರದಲ್ಲಿ ಫೆ.01ಮಡಿವಾಳ ಮಾಚಿದೇವ, ಫೆ.05 ಸವಿತಾ ಮಹರ್ಷಿ ಹಾಗೂ ಫೆ.10 ರಂದು ಕಾಯಕ ಶರಣರ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಹಾಯಕ ಆಯುಕ್ತ ಪಿ.ಪ್ರಮೋದ್ ತಿಳಿಸಿದರು.

ನಗರದ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ಮಹನೀಯರ ಜಯಂತಿ ಆಚರಣೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹನೀಯರ ಜಯಂತಿಯನ್ನು ಶಿಷ್ಠಾಚಾರದನ್ವಯ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ವಿವಿಧ ಇಲಾಖೆಗಳಿಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ವಿವಿಧ ಮಹನೀಯರ ಜಯಂತಿ ದಿನಗಳಂದು ನಗರದ ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜ್ ಮೈದಾನದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಭಾಂಗಣದವರೆಗೆ ನಡೆಯಲಿದೆ. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿ, ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ, ವಚನ ಗಾಯನ, ಸುಗಮ ಸಂಗೀತ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಸಮಾಜದ ಮುಖಂಡರು, ಸಮಾಜದಲ್ಲಿ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿಶೇಷ ಸಾಧನೆಗೈದವರನ್ನು ಸನ್ಮಾನಿಸಬೇಕು ಎಂದು ಪ್ರಸ್ತಾಪಿಸಿದರು.