ಜಿಲ್ಲೆ

ಸೃಜನಶೀಲ ಪ್ರತಿಭೆಗಳ ಗುರುತು

ಬಳ್ಳಾರಿ: ಇಲ್ಲಿನ ಹೊರವಲಯದ ಜ್ಞಾನಾಮೃತ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಲೇಖಕ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ ಮಂಪರುಗೆ 2024ರ ಸಂಗಂ ಸಾಹಿತ್ಯ ಪುರಸ್ಕಾರವನ್ನು ಭಾನುವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ವಿತರಿಸಿ ಸಾಹಿತಿ ಜಿ.ಪಿ.ಬಸವರಾಜ ಮಾತನಾಡಿ, ಸಂಗಂ ಪುರಸ್ಕಾರಕ್ಕೆ 73 ಕಾದಂಬರಿಗಳು ಬಂದಿದ್ದವು. ಈ ಪೈಕಿ ತುಂಬಾರಿ ರಾಮಯ್ಯ ಅವರ ಜಾಲ್ಗಿರಿ, ಇಂದ್ರಕುಮಾರ್ ಎಚ್.ಬಿ. ಅವರ ಎತ್ತರ, ಬೆಳಗಾವಿಯ ಲತಾಗುತ್ತಿ ಅವರ ಚದುರಂಗ ಹಾಗೂ ಗುರುಪ್ರಸಾದ್ ಕಾಗಿನೆಲೆ ಅವರ ಸತ್ಕುಲ ಪ್ರಸೂತರು ಕಾದಂಬರಿಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು. ತೀರ್ಪುಗಾರರಾದ ಸಿರಾಜ್ ಅಹ್ಮದ್, ತಾರಿಣಿ ಶುಭದಾಯಿನಿ, ವೆಂಕಟಗಿರಿ ದಳವಾಯಿ ತಂಡವು ಮಂಪರು ಕಾದಂಬರಿಯನ್ನು ಅಂತಿಮಗೊಳಿಸಿದೆ ಎಂದರು.

ಸಂಗಂ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ಸಂಗಂ ಟ್ರಸ್ಟ್ ಅಪ್ಪಟ ಸಾಹಿತ್ಯ ಚಟುವಟಿಕೆಗಳಿಗಾಗಿ ಸ್ಥಾಪಿತವಾಗಿದ್ದು ಸಮಕಾಲೀನ ಸೃಜನಶೀಲ ಪ್ರತಿಭೆಗಳನ್ನು ಗುರುತಿಸುತ್ತಾ ತನ್ನ ಕಾರ್ಯಕ್ಷೇತ್ರವನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದರು.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿ, ವಿಚಾರ ಸಂಕಿರಣಗಳನ್ನು ನಡೆಸುತ್ತಾ ಈ ಸಂಸ್ಥೆ ಸಾಹಿತ್ಯ ಚಟುವಟಿಕೆಗಳನ್ನು ಜೀವಂತವಾಗಿಸಿದೆ. ಸಂಗಂ ಸಾಹಿತ್ಯ ಪುರಸ್ಕಾರವನ್ನು 2022ರಲ್ಲಿ ಕಾವ್ಯ ವಿಭಾಗಕ್ಕೆ, 2023ರಲ್ಲಿ ಕಥಾ ವಿಭಾಗಕ್ಕೆ

ನೀಡಲಾಗಿತ್ತು. 2024ರ ಪುರಸ್ಕಾರವನ್ನು ಕಾದಂಬರಿ ಪ್ರಕಾರಕ್ಕೆ ನೀಡಲಾಗಿದೆ. ಪುರಸ್ಕಾರ ಕಾರ್ಯಕ್ರಮಕ್ಕೆ ನಾಡಿನ ಅನೇಕ ಲೇಖಕರು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸುತ್ತಿದ್ದಾರೆ ಎಂದರು.

ಎರಡು ದಿನಗಳ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಮಕಾಲೀನ ಕನ್ನಡ ಸಾಹಿತ್ಯ ಸ್ವರೂಪ ಹಾಗೂ ಸಂವೇದನೆ ಕುರಿತು ಮಾತುಕತೆ, ಸಮಕಾಲೀನ ಕನ್ನಡ ಕತೆ-ಕವಿತೆ, ಸಮಕಾಲೀನ ಕನ್ನಡ ಸಾಹಿತ್ಯ, ಸಮಕಾಲೀನ ಕನ್ನಡ ರಂಗಭೂಮಿ ಕುರಿತು ಸಂವಾದಗಳು, ನಾಡಿನ ವಿವಿಧ ಕವಿಗಳಿಂದ ಕವಿಗೋಷ್ಠಿ, ಸಂಗಂ ಸಾಹಿತ್ಯ ಪುರಸ್ಕಾರ ಅಂತಿಮ 5 ಕಾದಂಬರಿಕಾರರೊಂದಿಗೆ ಮಾತುಕತೆ ಜರುಗಿದವು. ರಾಜ್ಯದ ವಿವಿಧೆಡೆಗಳಿಂದ ಯುವ ಲೇಖಕರು ಹಾಗೂ ಕಾದಂಬರಿಕಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೋಟ್.. ಪ್ರತಿವರ್ಷ ಹಮ್ಮಿಕೊಳ್ಳುವ ಸಂಗಂ ಪುರಸ್ಕಾರ ಸಮಾರಂಭದಿಂದ ಅನೇಕ ಮೌಲ್ವಿಕ ಕೃತಿಗಳು ನಾಡಿಗೆ ಪರಿಚಯಿಸಿದಂತಾಗುತ್ತಿದೆ. ಮಂಪರು ಕಾದಂಬರಿ ಪ್ರಶಸ್ತಿಗೆ ಆಯ್ಕೆಗೊಂಡಿರುವುದು ಹೆಚ್ಚು ಸಂತಸವಾಗಿದೆ.

- ಚೀಮನಹಳ್ಳಿ ರಮೇಶಬಾಬು, ಲೇಖಕ.