ಜಿಲ್ಲೆ

ಉತ್ತಮ ನಾಯಕನಿಗೆ ಮತದಾನ ಅಗತ್ಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ದೇಶದ ಪ್ರಗತಿಯಾಗಬೇಕಾದರೆ, ಉತ್ತಮ ನಾಯಕನ ಆಯ್ಕೆ ಅಗತ್ಯ. ಹಾಗಾಗಿ ಪ್ರತಿಯೊಬ್ಬರೂ ಯಾವುದೇ ಆಮಿಷಕ್ಕೆ ಒಳಗಾಗದೇ ವಿವೇಚನೆಯಿಂದ ತಪ್ಪದೇ ಮತದಾನ ಮಾಡಬೇಕು ಎಂದು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.

ಇಲ್ಲಿನ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದ ಮತಪತ್ರ (ಬ್ಯಾಲೆಟ್ ಪೇಪರ್)ದ ಚುನಾವಣೆಗಳಲ್ಲಿ ಹಿರಿಯರೆಲ್ಲರೂ ಹಬ್ಬದಂತೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಪ್ರಮಾಣ ಹೆಚ್ಚಳಕ್ಕೆ ಪೂರಕವಾಗಿರುತ್ತಿದ್ದರು. ಆದರೆ ಈಗ ಬಟನ್ ಒತ್ತುವ ಮಾದರಿ ಬಂದರೂ ಸಹ ಈಗಿನ ಸಂದರ್ಭದಲ್ಲಿ ವಿದ್ಯಾವಂತರೂ ಸೇರಿದಂತೆ ಸೋಮಾರಿತನದಿಂದ ಮತದಾನದಿಂದ ಹೊರಗುಳಿಯುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು. ಚುನಾವಣೆಗಳು ಹಬ್ಬಗಳಿದ್ದಂತೆ. ಎಲ್ಲರೂ ತಪ್ಪದೇ ಭಾಗವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಸ್ವತಂತ್ರದಿಂದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂವಿಧಾನವು ಮತದಾನ ಹಕ್ಕು ನೀಡಿದೆ. ಇದರಿಂದ ಯಾರೂ ಹೊರಗುಳಿಯಬಾರದು ಎಂದರು.

ಡಿಸಿ ಪ್ರಶಾಂತಕುಮಾರ ಮಿಶ್ರಾ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ಮತದಾನ ಹಕ್ಕು ಚಲಾಯಿಸಬೇಕು. ವಿದ್ಯಾವಂತರು ತಮ್ಮ ಗೆಳೆಯರಿಗೆ, ಮನೆಗಳಲ್ಲಿ ಮತ್ತು ತಮ್ಮ ಅಕ್ಕ-ಪಕ್ಕದವರಿಗೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ನಮ್ಮ ದೇಶವು ಸದೃಢವಾಗಿರುವುದಕ್ಕೆ ಕಾರಣ ಭಾರತ ದೇಶದ ಚುನಾವಣಾ ಆಯೋಗದ ಆಡಳಿತ ಕಾರ್ಯವೈಖರಿಯಾಗಿದೆ. ದೇಶದಲ್ಲಿ ಅತಿಹೆಚ್ಚು ಯುವ ಮತದಾರರಿದ್ದಾರೆ. ಹಾಗಾಗಿ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.

ಬಳಿಕ ಮತದಾರರ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ಬ್ಯೂಟಿಫುಲ್ ಬಳ್ಳಾರಿ ಎಂಬ ಶೀರ್ಷಿಕೆಯಡಿ ಮುದ್ರಿಸಲಾದ ಕಾಫೀ ಟೇಬಲ್ ಬುಕ್ ಗಳನ್ನು ಗಣ್ಯರು ಅನಾವರಣಗೊಳಿಸಿದರು. ನಂತರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. 18 ವರ್ಷ ತುಂಬಿ ಹೊಸದಾಗಿ ನೋಂದಾಯಿಸಿಕೊಂಡ ಯುವ ಮತದಾರರಿಗೆ ಸಂಕೇತಿಕವಾಗಿ ಮತದಾರರ ಚೀಟಿ ವಿತರಿಸಲಾಯಿತು.