ಬಳ್ಳಾರಿ ; ಭಾರತೀಯ ಸಂಸ್ಕೃತಿಯ ಯೋಗ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆಯಾಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಯೋಗ ಶಿಕ್ಷಕ ಎಂ. ಗಣಪತಿ ಪ್ರಸಾದ್ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಧ್ಯೇಯ ವಾಕ್ಯದಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗ ಕೇವಲ ವ್ಯಾಯಾಮವಲ್ಲ, ಆರೋಗ್ಯ, ಮಾನಸಿಕ ಮತ್ತು ಶಾರೀರಿಕವಾಗಿ ಲಾಭದಾಯಕವಾಗಿದೆ. ದೇಹದ ಸಾಮರಸ್ಯ, ಆಲೋಚನೆ, ದೇಹದಲ್ಲಿ ನಡೆಯುವ ಕ್ರಿಯೆಗಳ ನಡುವಿನ ಸಮತೋಲನ, ಸಂಯಮ ಹಾಗೂ ಏಕಾಗ್ರತೆಯನ್ನು ಪ್ರೇರಿಪಿಸುತ್ತದೆ. ಯೋಗದಿಂದಾಗಿ ಒತ್ತಡದ ಜೀವನವನ್ನು ನಿರ್ವಹಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಮಾತನಾಡಿ, ಒತ್ತಡದ ಜೀವನ ನಿರ್ವಹಿಸಲು ಜನರು ಪಟ್ಟಣಗಳಿಂದ ಹಳ್ಳಿಗಳತ್ತ ಮುಖಮಾಡಿದ್ದಾರೆ. ಅದರಲ್ಲಿ ಯೋಗವನ್ನು ಅನುಸರಿಸುತ್ತಿದ್ದಾರೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಎಂದರು.
ಬಳಿಕ ವಿದ್ಯಾರ್ಥಿಗಳಿಂದ ಸಾಮಾನ್ಯ ಯೋಗ ಶಿಷ್ಟಾಚಾರ ಹಾಗೂ ಸಾಮೂಹಿಕ ಯೋಗ ಪ್ರದರ್ಶನ ಮಾಡಲಾಯಿತು. ಮಹೇಶ ಹಾಗೂ ಚಂದ್ರಿಕ ಯೋಗ ವಿದ್ಯಾರ್ಥಿಗಳಿಂದ ಯೋಗ ನೃತ್ಯ ಮಾಡಲಾಯಿತು. ನೋಟ್‌ಬುಕ್ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕೃತ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.