ಜಿಲ್ಲೆ

ಕೊಲೆಗೆ ಪ್ರಯತ್ನಿಸಿದ್ದ ಆರೋಪಿಗೆ 4 ವರ್ಷ ಕಠಿಣ ಸಜೆ

ಬಳ್ಳಾರಿ : ಕೊಲೆ ಮಾಡಲು ಪ್ರಯತ್ನಿಸಿದ್ದ ಆರೋಪಿ ನವೀನ್‌ಗೆ ಇಲ್ಲಿನ ನಾಲ್ಕನೇ ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಸಜೆ, 15 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ತಾಲೂಕಿನ ರೂಪನಗುಡಿ ಗ್ರಾಮದ ನವೀನ ಶಿಕ್ಷೆಗೆ ಒಳಗಾದ ಅಪರಾಧಿ. ಗ್ರಾಮದ ಗಂಗಾಧರ ಎನ್ನುವವರಿಗೆ ಅದೇ ಗ್ರಾಮದ ಲಕ್ಷ್ಮೀ ಎಂಬುವವರಿಂದ ಮದುವೆಯಾಗಿದ್ದು, ಮಕ್ಕಳಾಗದ ಹಿನ್ನೆಲೆಯಲ್ಲಿ ಎತ್ತಿನಬೂದಿಹಾಳ್ ಗ್ರಾಮದ ಸಂಬಂಧಿ ರಾಜೇಶ್ ಎನ್ನುವವರು, ತಮ್ಮ ಅಕ್ಕ ಪೂರ್ಣಿಮಾಳನ್ನು ನೀಡಿ ಮದುವೆ ಮಾಡಿದ್ದಾನೆ. ಇವರಿಗೆ ನವೀನ (19), ಕಾವ್ಯ (17) ಎಂಬ ಇಬ್ಬರು ಮಕ್ಕಳು ಇದ್ದಾರೆ. ಕಳೆದ 7 ವರ್ಷಗಳ ಹಿಂದೆ ಗಂಗಾಧರ ಮತ್ತು ತನ್ನ ಎರಡನೇ ಪತ್ನಿ ಪೂರ್ಣಿಮಾ, ತನ್ನಿಬ್ಬರು ಮಕ್ಕಳೊಂದಿಗೆ ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಆಗಾಗ ತನ್ನ ಸ್ವಗ್ರಾಮ ರೂಪನಗುಡಿಯಲ್ಲಿದ್ದ ತನ್ನ ಮೊದಲನೇ ಪತ್ನಿ ಲಕ್ಷ್ಮೀ ಮನೆಗೆ ಬಂದು ಹೋಗುತ್ತಿದ್ದನು. ಆದರೆ, ಕಳೆದ ಒಂದು ವರ್ಷದ ಹಿಂದೆ ಎರಡನೇ ಪತ್ನಿ ಪೂರ್ಣಿಮಾ ಬೆಂಗಳೂರಿನಲ್ಲಿ ಬೇರೆ ವ್ಯಕ್ತಿಯೊಂದಿಗೆ ಎಲ್ಲಿಗೋ ಹೋಗಿದ್ದರು. ಇದನ್ನೇ ನೆಪವಾಗಿಸಿಕೊಂಡ ಗಂಗಾಧರ ಮತ್ತವನ ಮಗ ನವೀನ, ಆಗಾಗ ಎತ್ತಿನಬೂದಿಹಾಳ್ ಗ್ರಾಮಕ್ಕೆ ಬಂದು, ನಮ್ಮ ದೊಡ್ಡಪ್ಪನ ಮಗ ರಾಜೇಶನಿಗೆ ನಿಮ್ಮ ಅಕ್ಕ ಪೂರ್ಣಿಮಾ ಎಲ್ಲಿಗೆ ಹೋಗಿದ್ದಾಳೆ, ನಿನಗೆ ವಿಷಯ ಗೊತ್ತಿದೆ ಹೇಳು ಎಂದು ಜಗಳ ಮಾಡುತ್ತಿದ್ದರು. ಇದರಿಂದ ನವೀನ ರಾಜೇಶನ ಮೇಲೆ ದ್ವೇಷವಿಟ್ಟುಕೊಂಡಿದ್ದು, ಕಳೆದ 2022 ಸೆ. 10 ರಂದು ಸಂಜೆ ರಾಜೇಶ್‌ನೊಂದಿಗೆ ರೂಪನಗುಡಿ ಗ್ರಾಮದ ಮದ್ಯದಂಗಡಿ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ನವೀನ ಅವಾಚ್ಯಶಬ್ದಗಳಿಂದ ನಿಂದಿಸಿ ಕೈಯಲ್ಲಿದ್ದ ಮಚ್ಚಿನಿಂದ ಬಲವಾಗಿ ರಾಜೇಶನ ತಲೆಗೆ ಎರಡು ಬಾರಿ ಒಡೆದು ಗಾಯಗೊಳಿಸಿದ್ದಾನೆ. ಈ ಕುರಿತು ಬಿ.ಸುಧಾಕರ ಎನ್ನುವವರು ನೀಡಿದ್ದ ದೂರಿನ ಮೇರೆಗೆ ಹಗರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗುಡಿ ವಾಸುದೇವ ರಾಧಕಾಂತ ಅವರು, ಆರೋಪಿ ನವೀನ್‌ಗೆ 4 ವರ್ಷ ಕಠಿಣ ಸಜೆ, 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ತಪ್ಪಿದ್ದಲ್ಲಿ 8 ತಿಂಗಳು ಸಾದಾ ಸಜೆ ಅನುಭವಿಸಬೇಕು. ಗಾಯಾಳು ರಾಜೇಶ್‌ಗೆ 40 ಸಾವಿರ ರೂ. ಪರಿಹಾರ ನೀಡಬೇಕು. ತಪ್ಪಿದ್ದಲ್ಲಿ ಆರೋಪಿ ಆಸ್ತಿಯಿಂದ ವಸೂಲಿ ಮಡಬಹುದು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲಕ್ಷ್ಮೀದೇವಿ ಪಾಟೀಲ್ ವಾದ ಮಂಡಿಸಿದ್ದರು.