ಬಳ್ಳಾರಿ : ಸಂಡೂರು ತಾಲೂಕಿನ ಕುರೆಕುಪ್ಪ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಸಾಕಣೆ ಮಾಡಲಾಗಿದ್ದ 2,400 ಕೋಳಿಗಳು ಕಳೆದ ಒಂದು ವಾರದ ಅವಧಿಯಲ್ಲಿ ಹಕ್ಕಿ ಜ್ವರದಿಂದ ಮೃತಪಟ್ಟಿವೆ.
ಸಾಕಣೆ ಕೇಂದ್ರದಲ್ಲಿ ಆರಂಭದಲ್ಲಿ ನಿತ್ಯ 20 ರಿಂದ 30 ಕೋಳಿ ಸತ್ತರೆ, ಬಳಿಕ ನಿತ್ಯ 100 ರಿಂದ 200 ಕೋಳಿಗಳು ಮೃತಪಟ್ಟಿವೆ. ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ. ನಂತರ 1020ಕ್ಕೂ ಹೆಚ್ಚು ಕೋಳಿಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸಾಯಿಸಲಾಗಿದೆ. ಹಕ್ಕಿ ಜ್ವರ ಕಾಣಿಸಿಕೊಂಡ ಕುರೇಕುಪ್ಪ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯನ್ನು ಅಪಾಯಕಾರಿ ವಲಯ ಎಂಬುದಾಗಿ ಗುರುತಿಸಲಾಗಿದೆ. ತೋರಣಗಲ್ಲು, ಕುರೇಕುಪ್ಪ, ವಡ್ಡು, ತಾಳೂರು, ಬಸಾಪುರ, ದರೋಜಿ ಹಾಗೂ ದೇವಲಾಪುರ ಸೇರಿ ಹತ್ತು ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಕಣ್ಣಾಗವಲು ವಲಯ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.