ಬಳ್ಳಾರಿ : ಇಲ್ಲಿನ ಶ್ರೀರಾಂಪುರ ಕಾಲನಿಯ ಮಾರ್ಕಂಡೇಯ ಬೀದಿಯಲ್ಲಿ ಅಪರಿಚಿತ ವ್ಯಕ್ತಿಗಳು ಅಸ್ಥಿಪಂಜರದ ತಲೆಬರುಡೆ, ಎಲುಬುಗಳನ್ನು ಇಟ್ಟು ವಾಮಾಚಾರ ಮಾಡಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶದಲ್ಲಿ ಈ ರೀತಿ ಮಾಡಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಿ, ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಪೊಲೀಸರನ್ನು ಆಗ್ರಹಿಸಿದರು.
ಕಾಲನಿಯ ಬೀದಿಯ ನೀರಿನ ಟ್ಯಾಂಕ್‌ರ ಬಳಿ ಅಪರಿಚಿತ ವ್ಯಕ್ತಿಗಳು, ಅಮಾವಾಸ್ಯೆ ಇರುವುದರಿಂದ ಭಾನುವಾರ ಮಧ್ಯರಾತ್ರಿ ಅಸ್ಥಿಪಂಜರದ ಮೂರ‌್ನಾಲ್ಕು ತಲೆಬುರುಡೆ, ಹತ್ತಾರು ಎಲುಬುಗಳನ್ನು ಇಟ್ಟು, ಕೂದಲು ಸುಟ್ಟು, ಹಣತೆಯಲ್ಲಿ ದೀಪ ಹಚ್ಚಿ, ಹೂವಿನ ಹಾರವನ್ನಿಟ್ಟು ಪೂಜೆ ಸಲ್ಲಿಸಿ ವಾಮಾಚಾರ ಮಾಡಿದ್ದಾರೆ. ಯಾರು ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಸೋಮವಾರ ಬೆಳಗಿನ ಜಾವ ಮನೆಯಿಂದ ಹೊರಬಂದಾಗ ರಸ್ತೆಯಲ್ಲಿ ಮಾಡಿರುವ ವಾಮಾಚಾರವನ್ನು ಕಂಡ ಸ್ಥಳೀಯ ನಿವಾಸಿಗಳು ಗಾಬರಿಗೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಬ್ರೂಸ್‌ಪೇಟೆ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಮಾತನಾಡಿ, ಕಳೆದ ವರ್ಷ ಇದೇ ಅಮಾವಾಸ್ಯೆಯಂದೂ ಸಹ ಅದೇ ಸ್ಥಳದಲ್ಲಿ ಇದೇ ರೀತಿ ವಾಮಾಚಾರ ಮಾಡಲಾಗಿತ್ತು. ಅಂದು ಅಸ್ಥಿಪಂಜರದ ಕೇವಲ ಒಂದು ತಲೆಬುರುಡೆ, ಒಂದೆರಡು ಎಲುಬುಗಳನ್ನು ಇಟ್ಟು ವಾಮಾಚಾರ ಮಾಡಲಾಗಿತ್ತು. ಆದರೆ, ಇಂದು ಮೂರ‌್ನಾಲ್ಕು ತಲೆಬುರುಡೆಗಳು, ಹತ್ತಾರು ಎಲುಬುಗಳನ್ನು ಇಡಲಾಗಿದೆ. ವಾಮಾಚಾರದ ಸ್ಥಳದಲ್ಲಿ ಎರಡು ಬುರುಡೆಗಳನ್ನು ಇಡಲಾಗಿದ್ದು, ಪಕ್ಕದ ನೀರಿನ ಟ್ಯಾಂಕ್ ಮೇಲೆ ಒಂದು ತಲೆಬುರುಡೆಯನ್ನು ಇಡಲಾಗಿದೆ. ಆ ವಾಮಾಚಾರವನ್ನು ನೋಡಿದರೆ ಜನರಲ್ಲಿ ಭಯಬೀಳಿಸುವಂತಿದೆ. ಬೀದಿಯ ಜನರು ಇದೇ ರಸ್ತೆಯ ಮೂಲಕವೇ ನಿತ್ಯ ಸಂಚರಿಸುತ್ತಾರೆ. ಮೇಲಾಗಿ ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದ್ದು, ಮಕ್ಕಳು ಮೂತ್ರ ವಿಸರ್ಜನೆಗೆ ನೀರಿನ ಟ್ಯಾಂಕ್ ಬಳಿಗೆ ಹೋಗುತ್ತಾರೆ. ಏನಾದರು ಆದರೆ, ಯಾರು ಜವಾಬ್ದಾರರು? ವಾಮಾಚಾರ ಮಾಡಿರುವುದರಿಂದ ಕೇಂದ್ರಕ್ಕೆ ಬಂದಿದ್ದ ಮಕ್ಕಳನ್ನು ಪೋಷಕರು ವಾಪಸ್ ಕರೆದುಕೊಂಡು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ತುಳಸಿ ಮಾತನಾಡಿ, ಬೀದಿಯಲ್ಲಿ ಎರಡನೇ ಬಾರಿಗೆ ಈ ರೀತಿ ಆಗುತ್ತಿದೆ. ಅಂಗನವಾಡಿ ಬಳಿಯ ವಿದ್ಯುತ್ ಕಂಬಕ್ಕೆ ಒಂದು ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಕಳೆದ ಬಾರಿಯೇ ಪೊಲೀಸರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಸಿಸಿ ಕ್ಯಾಮೆರಾ ಹಾಕಿದ್ದರೆ ವಾಮಾಚಾರ ಮಾಡಿದರ‌್ಯಾರು ಎಂಬುದು ಗೊತ್ತಾಗುತ್ತಿತ್ತು. ಇನ್ನಾದರೂ, ಸಿಸಿ ಕ್ಯಾಮೆರಾ ಅಳವಡಿಸಿ, ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಬ್ರೂಸ್‌ಪೇಟೆ ಠಾಣೆಯ ಸಿಪಿಐ ಎಂ.ಎನ್.ಸಿಂಧೂರ ಸೇರಿ ಸಿಬ್ಬಂದಿಯು ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿದರು. ಸ್ಥಳೀಯ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ತಾವು ದೂರು ನೀಡಿದಲ್ಲಿ ನಾವು ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆಹಚ್ಚಲಾಗುವುದು ಎಂದು ಭರವಸೆ ನೀಡಿದರು.