ಜಿಲ್ಲೆ

ಶರಣರ ಚಿಂತನೆಗಳು ಯುವಕರು ಪಾಲಿಸಿ

ಬಳ್ಳಾರಿ : ಶರಣರ ಚಿಂತನೆಗಳನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಶ್ರೀರಾಘವಾಂಕ ಸ್ವಾಮಿಗಳ ಮಠದ ಟ್ರಸ್ಟ್ ಅಧ್ಯಕ್ಷ ಜಿ.ಪಾಲಾಕ್ಷಗೌಡ ಹೇಳಿದರು.

ಪಟ್ಟಣದ ಶ್ರೀರಾಘವಾಂಕ ಸ್ವಾಮಿಗಳ ಮಠದಲ್ಲಿ ಲಿಂಗೈಕ್ಯ ಶ್ರೀರಾಘವಾಂಕ ಸ್ವಾಮೀಜಿ ಅವರ 91ನೇವರ್ಷದ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀರಾಘವಾಂಕ ಸ್ವಾಮೀಜಿ ತಾಲೂಕು ಸೇರಿ ಸುತ್ತ ಮುತ್ತಲಿನ ಭಾಗಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಭಕ್ತಾದಿಗಳ ಸಮೃದ್ಧಿ ಜೀವನ ಹಾಗೂ ಉತ್ತಮ ಮಳೆ, ಬೆಳೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸಿದ್ದಾರೆ ಎಂದರು.

ಮಠದ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಸ್.ಎಂ.ಶಿವರುದ್ರಯ್ಯ ಸ್ವಾಮಿ ಮಾತನಾಡಿ, ಶ್ರೀಗಳು ಜೀವಂತವಿರುವ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಆಯೋಜಿಸುತ್ತಿದ್ದರು. ಮಠದ ಭಕ್ತರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದರು ಎಂದು ಹೇಳಿದರು.

ಜನ್ಮದಿನ ಆಚರಣೆ ಅಂಗವಾಗಿ ಶ್ರೀಮಠದಲ್ಲಿ ಬೆಳಗ್ಗೆಯಿಂದ ತಾತನವರ ಗದ್ದುಗೆಗೆ ವಿಶೇಷ ಪೂಜೆ, ಹೋಮ ಹವನ, ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.