ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಉದಯ ಹಾಸ್ಟೇಲ್ ಬಳಿಯ ಕರ್ನಾಟಕ ವಿಶ್ವ ವಿದ್ಯಾಲಯ ಜಾಗದಲ್ಲಿ ನಿರ್ಮಿಸುತ್ತಿರುವ ದೀನದಯಾಳ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯಗಳ ಕಾಮಗಾರಿಯನ್ನು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಸೋಮವಾರ ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ 70 ಕೊಟಿ ರೂ. ಮತ್ತು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ 26 ಕೋಟಿ ರೂ. ಸೇರಿ ಒಟ್ಟು 96 ಕೋಟಿ ರೂ. ವೆಚ್ಚದಲ್ಲಿ ನಿಮಿರ್ಸಲಾಗುತ್ತಿದೆ. ವಿದ್ಯಾರ್ಥಿ ನಿಲಯವು ಒಟ್ಟು 6 ಬ್ಲಾಕ್ಗಳನ್ನು ಹೊಂದಿದ್ದು, ಉತ್ತಮ ಬೆಳಕು, ಗಾಳಿ, ಅಧ್ಯಯನಕ್ಕೆ ಅಗತ್ಯ ವಾತಾವರಣವಿದೆ. ಪದವಿ ಮತ್ತು ಸ್ನಾತಕೋತ್ತರದ ಸುಮಾರು 1500 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಎಲ್ಲ ಜಾತಿಯ ವಿದ್ಯಾರ್ಥಿಗಳಿಗೆ ಒಂದೇ ಹಾಸ್ಟೆಲ್ನಲ್ಲಿ ಅವಕಾಶ ಕಲ್ಪಿಸಿರುವುದರಿಂದ ಸಹೋದರತ್ವ ಬೆಸೆಯಲು ಸಾಧ್ಯವಾಗುತ್ತದೆ. ಈ ಆಶಯದೊಂದಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲೆ ಒತ್ತಡ ಹೇರಿ ಮಂಜೂರಾತಿ ಪಡೆಯಲಾಗಿತ್ತು. ರಾಜ್ಯದ 6 ಹಾಸ್ಟೇಲ್ಗಳಲ್ಲಿ ಧಾರವಾಡ ಸಹ ಒಂದು. ಇದೀಗ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ನಗರದ ಮಧ್ಯ ಭಾಗದಲ್ಲಿರುವುದರಿಂದ ಅನುಕೂಲವಾಗಲಿದೆ ಎಂದರು.
ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಷ್ಣುತಿರ್ಥ ಕೊರ್ಲಹಳ್ಳಿ, ಜ್ಯೋತಿ ಪಾಟೀಲ, ಅಧಿಕಾರಿಗಳು, ಇತರರು ಇದ್ದರು.
*ಕವಿವ ಸಂಘದ ಪರ ಒತ್ತಡ : ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಜಾಗೆ, ಅಗತ್ಯ ಅನುದಾನ ಪಡೆಯುವುದು ಸೇರಿ ಇತರ ಬೇಡಿಕೆಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ನಾಡಿನ ಹಿರಿಯ ಸಂಸ್ಥೆಯೂ ಆಗಿರುವ ಸಂಘವು ಮೈಸೂರು ಮಹಾರಾಜರು ಕೊಟ್ಟ ಆರ್ಥಿಕ ನೆರವಿನಿಂದ ಆರಂಭವಾಗಿದೆ. ಅನೇಕ ಮಹನೀಯರು ಸಂಘವನ್ನು ಅತಿ ಕಾಳಜಿಯಿಂದ ಮುನ್ನಡೆಸುತ್ತ ಬಂದಿದ್ದಾರೆ. ಇಂತಹ ಸಂಘಕ್ಕೆ ಅಗತ್ಯವಿರುವ ನೆರವು ಒದಗಿಸುವುದು ಸರ್ಕಾರದ ಹೊಣೆ. ಈ ಕುರಿತು 2 ಬಾರಿ ಸದನದಲ್ಲೂ ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸರ್ಕಾರದಿಂದ ಸಂಘದ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇನೆ ಎಂದು ಅರವಿಂದ ಬೆಲ್ಲದ ತಿಳಿಸಿದರು.