ಬೆಂಗಳೂರು: ಶಾಸಕ ಅರವಿಂದ್ ಬೆಲ್ಲದ್ಗೆ ಬಂದಿವೆ ಎನ್ನಲಾದ ಅನಾಮಧೇಯ ಕರೆಗಳು ಹಾಗೂ ಫೋನ್ ಕದ್ದಾಲಿಕೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕರೆ ಮಾಡಿದ್ದಾನೆ ಎನ್ನಲಾದ ಹೈದರಾಬಾದ್ ಮೂಲದ ವ್ಯಕ್ತಿಯ ಬೆನ್ನತ್ತಿದ ತನಿಖಾಧಿಕಾರಿಗಳಿಗೆ ಅರ್ಚಕರೊಬ್ಬರು ಸಿಕ್ಕಿದ್ದಾರೆ. ಅವರೂ ಶಾಸಕರ ಆಪ್ತ ಎಂಬುದು ವಿಶೇಷ. ಆದರೆ, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅರ್ಚಕರು ವಾದಿಸಿದ್ದಾರೆ. ಇದೆಲ್ಲದರ ಮಧ್ಯೆ ಕದ್ದಾಲಿಕೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಎಸಿಪಿ ಯತಿರಾಜ್ ಅವರನ್ನು ಬದಲಾವಣೆಗೊಳಿಸಿ ಆ ಜಾಗಕ್ಕೆ ಎಸಿಪಿ ಎಂ.ಜೆ.ಪೃಥ್ವಿ ಅವರನ್ನು ನೇಮಿಸಲಾಗಿದೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಯುವರಾಜ್ ಅಲಿಯಾಸ್ ಸ್ವಾಮಿಯಿಂದ ಕರೆ ಬಂದಿರುವುದಾಗಿ ಆರೋಪಿಸಿ ಅರವಿಂದ್ ಬೆಲ್ಲದ್ ದೂರು ನೀಡಿದ್ದರು. ಕಬ್ಬನ್ಪಾರ್ಕ್ ಎಸಿಪಿ ಯತಿರಾಜ್ ನೇತೃತ್ವದ ತಂಡ ಸಿಡಿಆರ್ ಮೂಲಕ ಶಾಸಕರಿಗೆ ಬಂದಿದ್ದ ಅನಾಮಧೇಯ ಕರೆಯ ಜಾಡು ಹಿಡಿದು ಹೊರಟಾಗ ಹೈದರಾಬಾದ್ ಮೂಲದ ಅರ್ಚಕ ಜಿತೇಂದ್ರನಾಥ್ ಪ್ರಕಾಶ್ ಎಂಬುವರ ಮೊಬೈಲ್ ನಂಬರ್ನಿಂದ ಕರೆ ಬಂದಿರುವುದು ದೃಢಪಟ್ಟಿತ್ತು. ಪೊಲೀಸರ ತಂಡ ಹೈದರಾಬಾದ್ಗೆ ತೆರಳಿ ಜಿತೇಂದ್ರನಾಥ್ರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ‘ನನಗೆ ಶಾಸಕ ಅರವಿಂದ್ ಬೆಲ್ಲದ್ ಗೊತ್ತಿದೆ. ಆದರೆ, ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ತನಿಖಾ ತಂಡ ಬೆಂಗಳೂರಿಗೆ ವಾಪಸ್ಸಾಗಿದೆ. ಈ ಬಗ್ಗೆ ಬೆಲ್ಲದ್ ಅವರಿಂದ ಮಾಹಿತಿ ಕಲೆ ಹಾಕಿದಾಗ, ಜಿತೇಂದ್ರನಾಥ್ ನನಗೆ ಆಪ್ತರಾಗಿದ್ದು, ಅವರಿಗೆ ಯಾವುದೇ ತೊಂದರೆ ಕೊಡಬೇಡಿ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಅರವಿಂದ್ ಬೆಲ್ಲದ್ಗೆ ನೋಟಿಸ್ ನೀಡಲಾಗಿದೆ.
ಯುವರಾಜ್ ವಿಚಾರಣೆ: ಪ್ರಕರಣದಲ್ಲಿ ಯುವರಾಜ್ ಹೆಸರು ತುಳುಕುಹಾಕಿಕೊಂಡಿತ್ತು. ಹೀಗಾಗಿ ತನಿಖಾಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ಆತನನ್ನು ವಿಚಾರಣೆ ನಡೆಸಿದಾಗ ‘ನನಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ’ ಎಂದು ಹೇಳಿದ್ದಾನೆ ಎನ್ನಲಾಗಿದೆ.ಆರೇ ದಿನದಲ್ಲಿ ತನಿಖಾಧಿಕಾರಿ ಬದಲು ಪ್ರಕರಣದ ತನಿಖಾಧಿಕಾರಿಯಾಗಿದ್ದ ಕಬ್ಬನ್ ಪಾರ್ಕ್ ಎಸಿಪಿ ಬಿ.ಆರ್.ಯತಿರಾಜ್ ಬದಲಾಯಿಸಿ ಅವರ ಜಾಗಕ್ಕೆ ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಎಂ.ಜೆ.ಪೃಥ್ವಿ ನೇಮಿಸಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಆದೇಶಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಯತಿರಾಜ್ ಹೆಸರಿತ್ತು. ಆಗ ಸಿಸಿಬಿಯಲ್ಲಿ ಯತಿರಾಜು ಇನ್ಸ್ಪೆಕ್ಟರ್ ಆಗಿದ್ದರು. ಸಿಬಿಐ ತನಿಖೆ ಎದುರಿಸಿದ್ದರು. ಪ್ರಸ್ತುತ ಪ್ರಕರಣದ ತನಿಖಾಧಿಕಾರಿಯಾಗಿ ಯತಿರಾಜು ಮುಂದುವರಿಸುವುದು ನೈತಿಕವಾಗಿ ಸರಿಯಲ್ಲ ಎಂಬ ಕಾರಣಕ್ಕೆ ಅವರನ್ನು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.