ಜಿಲ್ಲೆ

ಸಿಎಂ ರಾಜಿನಾಮೆಗೆ ಬೆಲ್ಲದ ಆಗ್ರಹ

Dharwada - Basavaraj Idli

ಹುಬ್ಬಳ್ಳಿ: ಮುಡಾ ಹಗರಣ ರಾಜ್ಯ ಕಂಡ ಅತ್ಯಂತ ದೊಡ್ಡ ಪ್ರಕರಣವಾಗಿದ್ದು, ಸುಮಾರು 4 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿರುವ ಬಗ್ಗೆ ಸುದ್ದಿ ಕೇಳಿ ರಾಜ್ಯದ ಜನರು ಶಾಕ್ ಆಗಿದ್ದರು. ಇದರಲ್ಲಿ ಸಿಎಂ ಕುಟುಂಬವೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಈ ನೆಲದ ಕಾನೂನಿಗೆ ಸಿಕ್ಕ ಜಯ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ್ಪು ತಿಂದವ ನೀರು ಕುಡಿಯಲೇಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಆಗಲೇ ಜನರಿಗೆ ಕಾನೂನಿನ ಬಗ್ಗೆ ವಿಶ್ವಾಸ ಬರುತ್ತದೆ. ಈ ದೃಷ್ಟಿಯಲ್ಲಿ ಹೆಚ್ಚಿನ ತನಿಖೆಗೆ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದರು.

ಮುಡಾ ಹಗರಣದಲ್ಲಿ ಭಾಗಿಯಾದ ಅನೈತಿಕ ಮುಖ್ಯಮಂತ್ರಿಯನ್ನು ಆ ಸ್ಥಾನದಲ್ಲಿ ನೋಡಲು ಜನರು ಇಚ್ಚೆ ಪಡುವುದಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಈ ರೀತಿಯ ಸಿಎಂ ಅನ್ನು ಮುಂದುವರಿಸಲು ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜಿನಾಮೆ ನೀಡಬೇಕು. ಅವರು ಎಲ್ಲಿಯವರೆಗೂ ರಾಜಿನಾಮೆ ನೀಡುವುದಿಲ್ಲವೋ ಅಲ್ಲಿಯವರೆಗೂ ಹೋರಾಟ ಕೈಬಿಡುವುದಿಲ್ಲ. ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಆರೋಪ ಕೇಳಿ ಬಂದಾಗ ಅಂದಿನ ರಾಜ್ಯಪಾಲರು ಯಾವುದೇ ನೋಟಿಸ್ ನ್ನು ಕೂಡ ಕೊಡದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಆದರೆ, ಸಿದ್ದರಾಮಯ್ಯ ಅವರ ವಿಷಯದಲ್ಲಿ ಇಂದಿನ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಅದಕ್ಕೆ ಸಮರ್ಪಕ ವಿವರಣೆ ನೀಡದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಅಗತ್ಯ ಇದೆ ಎಂದು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದರಲ್ಲಿ ರಾಜ್ಯಪಾಲರ ತಪ್ಪಿಲ್ಲ ಎಂದರು.

ಬಿಜೆಪಿ ಸರ್ಕಾರದ ಪ್ರಕರಣಗಳ ಬಗ್ಗೆ ಕೇಳುವ ಕಾಂಗ್ರೆಸ್ನವರು ತಮ್ಮದೇ ಸರ್ಕಾರ ಇದೆ, ಬೇಕಿದ್ದರೆ ಎಲ್ಲವನ್ನೂ ತನಿಖೆ ಮಾಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದಾರೆ ಎಂದರೆ ಸಿಎಂ ಏನೇ ಮಾಡಿದರೂ ನಡೆಯುತ್ತದೆಯೇ? ಬಾರಾ ಖೂನ್ ಮಾಫಾ? ಎಂದು ಪ್ರಶ್ನಿಸಿದ ಬೆಲ್ಲದ, ಇದನ್ನೆಲ್ಲ ನೋಡಿ ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಸರ್ಕಾರ ರಚನೆಗೆ ನಮ್ಮ ಆಸಕ್ತಿಯೂ ಇಲ್ಲ. ಸಿಎಂ ಬದಲಾಗಲಿ, ಬೇಕಿದ್ದರೆ ಅವರೇ ಐದು ವರ್ಷ ಸರ್ಕಾರ ಮಾಡಲಿ, ಆದರೆ, ಸ್ವಚ್ಛ ಆಡಳಿತ ನೀಡಲಿ ಎಂಬುದಷ್ಟೇ ನಮ್ಮ ಬಯಕೆ ಎಂದರು.

ಪ್ರಾಸಿಕ್ಯೂಷನ್ ವಿರೋಧಿಸಿ ಕಾಂಗ್ರೆಸ್ ನವರು ಪ್ರತಿಭಟನೆ ಮಾಡುತ್ತಿರುವುದನ್ನು ನೋಡಿ ರಾಜ್ಯದ ಜನರು ನಗುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಸಿಎಂ ಸಲುವಾಗಿ ಪ್ರತಿಭಟನೆ ಮಾಡುವ ಯಾವುದೇ ನೈತಿಕತೆ ಇಲ್ಲ. ಹಗರಣದಲ್ಲಿ 14 ಸೈಟ್ ಪಡೆದಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ ಎಂದರು.