ಜಿಲ್ಲೆ

ಕಂಟಕ ದಾಟಿದರಷ್ಟೇ ಕಚೇರಿ ಕೆಲಸ.! ನಾಡಕಚೇರಿಗೆ ಅಪಾಯದ ಸರಮಾಲೆಯ ಸ್ವಾಗತ

Belagavi - Ravi Arjun Gosavi

ರವಿ ಗೋಸಾವಿ ಬೆಳಗಾವಿ
‘ಸರ್ಕಾರದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಬಂದ ತಾವು ಸ್ವಲ್ಪ ಯಾಮಾರಿದರೂ ಆಸ್ಪತ್ರೆ ಸೇರಬೇಕಾದೀತು ಎಚ್ಚರ. ಕಚೇರಿ ಮುಂದೆ ಜೀವಹಾನಿಗಾಗಿಯೇ ಬಾಯ್ತೆರೆದಿರುವ ಚರಂಡಿ ಹಾಸಿನ ಮೇಲೆ ಜೀವ ಕೈಯಲ್ಲೇ ಹಿಡಿದು ದಾಟಿಬಂದ ತಾವು, ಕಚೇರಿಯಿಂದ ವಾಪಸ್ಸಾಗುವಾಗಲೂ ಕಂಟಕದ ಸಂಕಷ್ಟಕ್ಕೆ ಸಿಲುಕದೆ ಪಾರಾಗಲಿ’ ಎಂದು ಆಶಿಸುತ್ತೇವೆ.

ಬೆಳಗಾವಿ ಉಪ ತಹಸೀಲ್ದಾರ್ ಕಚೇರಿಗೆ ಮುಖ್ಯದ್ವಾರದ ಪರಿಸ್ಥಿತಿ

ದಿನವೂ ಇಂತಹದ್ದೊಂದು ಅಪಾಯದ ಸರಮಾಲೆಗಳ ಎಚ್ಚರಿಕೆಯ ಸ್ವಾಗತ ಕೋರುತ್ತಿರುವುದು ಮತ್ಯಾರೂ ಅಲ್ಲ. ಬೆಳಗಾವಿ ತಾಲೂಕಿನ ಉಪ ತಹಸೀಲ್ದಾರ್ ಕಚೇರಿ(ನಾಡ ಕಚೇರಿ). ರಾಜ್ಯದ ಎರಡನೇ ರಾಜಧಾನಿ ಖ್ಯಾತಿಯ ಸ್ಮಾರ್ಟ್ ಸಿಟಿ ಬೆಳಗಾವಿಯಲ್ಲಿನ ಉಪ ತಹಸೀಲ್ದಾರ್ ಕಚೇರಿ ಗೇಟಿನ ಮುಂದಿರುವ ಚರಂಡಿಯ ಹಾಸು ಅಲ್ಲಲ್ಲಿ ಹಾಳಾಗಿ ಗುಂಡಿ ಬಿದ್ದಿವೆ. ಅಲ್ಲಲ್ಲಿ, ಕಬ್ಬಿಣದ ಸರಳುಗಳು ಎದ್ದಿದ್ದು, ಪ್ರತಿ ದಿನ ನಾಡಕಚೇರಿಗೆ ಆಗಮಿಸುವವರು ಫಜೀತಿ ಅನುಭವಿಸುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿ ಕಡೆಯಿಂದ ರಿಸಾಲ್ದಾರ್ ಗಲ್ಲಿಯ ಖಡೇಬಜಾರ್ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಹಾಗೂ ಉಪ ತಹಸೀಲ್ದಾರ್ ಕಚೇರಿಗಳ ಮುಂಭಾಗದಲ್ಲಿನ ಪಾದಚಾರಿ ಮಾರ್ಗವೇ ಕಾಣದಂತಾಗಿದ್ದು, ರಸ್ತೆ ಬದಿಯಲ್ಲಿನ ಚರಂಡಿಯ ಹಾಸು ಕುಸಿದಿದೆ. ಇಲ್ಲಿ ಸುಮಾರು 20ಕ್ಕೂ ಅಧಿಕ ಸೈಬರ್ ಕೇಂದ್ರಗಳಿದ್ದು, ದಿನವೂ ಸಾವಿರಾರು ಜನ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಆಗಮಿಸುತ್ತಿದ್ದು, ಕಚೇರಿ ಒಳ ಹೋಗಲು ಹಾಗೂ ಚರಂಡಿ ಹಾಸಿನ ಮೇಲೆ ತೆರಳಲು ಭಯಪಡುವಂತಾಗಿದೆ.

ಇತ್ತೀಚೆಗೆ ಜಮೀನಿನ ಪಹಣಿ ಪತ್ರ ತಿದ್ದುಪಡಿಗಾಗಿ ಯಳ್ಳೂರಿನಿಂದ ಬಂದಿದ್ದ ವೃದ್ಧರೊಬ್ಬರು ಬಿದ್ದು ಗಾಯಗೊಂಡಿದ್ದರು. ಆಗ, ಇಷ್ಟು ಸೆರಳುಗಳು ಕಾಣುತ್ತಿರಲಿಲ್ಲ. ಇದೀಗ ಅಲ್ಲಿ ಕಾಲಿಟ್ಟರಂತೂ ಪ್ರಾಣಾಪಾಯ ಖಂಡಿತ. ಗೇಟಿನ ಮುಂದೆ ರಸ್ತೆ ದಾಟುವಲ್ಲಿ ಬಿದ್ದಿರುವ ಚರಂಡಿ ಗುಂಡಿಗಳು ಭಯಬೀಳಿಸುವಂತಿವೆ. ಇಲ್ಲಿಗೆ ಬರುವ ದ್ವಿಚಕ್ರ ವಾಹನ ಸವಾರರು, ವೃದ್ಧರು ಹಾಗೂ ಮಕ್ಕಳು ಸೇರಿದಂತೆ ಸಾಕಷ್ಟು ಜನ ಬಿದ್ದು ಗಾಯಗೊಂಡಿದ್ದಾರಂಥೆ. ಹೀಗಾಗಿ ಎಚ್ಚರಿಕೆಯಿಂದ ಗೇಟು ದಾಟುವಂತೆ ನಾವೇ ಹೇಳುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಸ್ಥಳೀಯ ನಿವಾಸಿ ಮಂಜುನಾಥ ಚೌಗಲೆ.
ಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಮಾಡಿರುವುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದ್ದು, ಸಮಸ್ಯೆ ಪರಿಹರಿಸುವಂತೆ ಹತ್ತಾರು ಬಾರಿ ಪಾಲಿಕೆಗೆ ಮನವಿ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರುತ್ತಿದ್ದು, ಸರ್ಕಾರದ ಯೋಜನೆಗಳು ಆಸರೆಯಾದೀತು ಎಂದು ಅರ್ಜಿ ಸಲ್ಲಿಸಲು ಆಗಮಿಸುವ ಮಹಿಳೆಯರು ಮತ್ತು ವೃದ್ಧರು ಈ ಅವಸ್ತೆ ಕಂಡು ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕುತ್ತಿರುವುದಂತೂ ತಪ್ಪಿಲ್ಲ.

ಪಾದಚಾರಿ ಮಾರ್ಗಗಳೇ ಕಾಣೆ!
ಇನ್ನು ನಗರದ ಹಲವೆಡೆ ಪೇವರ್ಸ್‌ಗಳು ಕಿತ್ತು ಹೋಗಿದ್ದು, ಕೇಬಲ್ ಅಳವಡಿಸಲು ಪಾದಚಾರಿ ಮಾರ್ಗವನ್ನೇ ಅಗೆಯಲಾಗಿದೆ. ಇದರಿಂದ, ಸಾರ್ವಜನಿಕರು ಮುಖ್ಯರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವಡೆ ಪಾದಚಾರಿ ಮಾರ್ಗಗಳು ಅತಿಕ್ರಮವಾಗಿದ್ದು, ಇನ್ನೂ ಕೆಲವೆಡೆ ಸುಸಜ್ಜಿತ ಪಾದಚಾರಿ ಮಾರ್ಗಗಳಲ್ಲಿ ಗೂಡಂಗಡಿಗಳು ತಲೆ ಎತ್ತಿದ್ದು, ದುಸ್ಥಿತಿಯಲ್ಲಿರುವ ಪಾದಚಾರಿ ಮಾರ್ಗಗಳಿಂದ ನಾಗರಿಕರು ಆಯತಪ್ಪಿ ಅನಾಹುತ ಮಾಡಿಕೊಳ್ಳುವಂತಾಗಿದೆ. ಪಾದಚಾರಿ ಮಾರ್ಗ ಗೂಡಂಗಡಿಗಳ ಸ್ಥಾಪನೆಗೆ, ಅಂಗಡಿಗಳ ಅಕ್ರಮ ವಿಸ್ತರಣೆಗೆ ಬಳಕೆಯಾಗಿರುವುದರಿಂದ ಪಾದಚಾರಿಗಳು ಅಪಾಯಕ್ಕೆ ಎದೆಯೊಡ್ಡಿ ರಸ್ತೆಯಲ್ಲೇ ಸಂಚರಿಸುವುದು ಅನಿವಾರ್ಯವಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿನ ಪಾದಚಾರಿ ಮಾರ್ಗ ಬೀದಿ ಬದಿ ವ್ಯಾಪಾರಸ್ಥರ ಗೂಡಂಗಡಿಗಳಿಂದಲೇ ತುಂಬಿದೆ. ಇನ್ನು ಹಳೆ ಪಿ.ಬಿ.ರಸ್ತೆಯ ಡಿಸಿಸಿ ಬ್ಯಾಂಕ್ ಎದುರಿನಲ್ಲಿ ಆಟೋ ರೀಕ್ಷಾ ಹಾಗೂ ಖಾಸಗಿ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ.