ಬೆಳಗಾವಿ : ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಪರಾದ ತಡೆ ಹಾಗೂ ಎನ್‌ಡಿಪಿಎಸ್ ಪ್ರಕರಣಗಳ ಕುರಿತು ಬೆಳಗಾವಿ ಪೊಲೀಸ್ ಕಮಿಷನರೇಟ್ ವತಿಯಿಂದ ಬೆಳಗಾವಿ ನಗರ ಪೊಲೀಸ್ ಸೇರಿದಂತೆ ಉತ್ತರ ವಲಯದ ಐದು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳಿಗಾಗಿ ಬುಧವಾರ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಾನೂನು ಸಲಹೆಗಾರರಾದ ಮಹೇಶ ವೈದ್ಯ ಅವರು ಅಪರಾದ ತಡೆಯುವುದು ಹಾಗೂ ಎನ್‌ಡಿಪಿಎಸ್ ಪ್ರಕರಣಗಳ ಕುರಿತು ಮಾಹಿತಿ ನೀಡಿ, ಪೊಲೀಸ್ ಅಧಿಕಾರಿಗಳಿಗೆ ಕಾನೂನು ಜಾಗೃತಿ ಮೂಡಿಸಿದರು.
ಚುನಾವಣಾ ಸಂದರ್ಭದಲ್ಲಿ ನಡೆಯುವ ರಾಜಕೀಯ ಘರ್ಷಣೆಗಳು, ಆಮಿಷಗಳು, ಕೋಟ್ಯಾಂತರ ರೂ.ಹಣ ವಿನಿಮಯ ಮತ್ತು ಹಂಚಿಕೆ, ಪರಸ್ಪರ ಪೈಪೋಟಿ, ಅಕ್ರಮ ಮದ್ಯ ಹಂಚಿಕೆ ಸೇರಿ ಹತ್ತು ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಲಹೆ ನೀಡಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಐಜಿಪಿ ಎನ್.ಸತೀಶಕುಮಾರ್ ಅವರು ಸೂಚನೆಯಂತೆ ಎಸ್ಪಿಗಳಾದ ಡಾ.ಸಂಜೀವ ಪಾಟೀಲ, ಬಿ.ಆರ್.ನೇಮಗೌಡ, ಎಚ್.ಟಿ. ಸೋಮಶೇಖರ್, ವೇಣುಗೋಪಾಲ, ಡಿಸಿಪಿ ಪಿ.ವಿ. ಸ್ನೇಹಾ ಸೇರಿದಂತೆ ಉತ್ತರ ವಲಯದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಜಿಲ್ಲೆಗಳ ವರೀಷ್ಠಾಧಿಕಾರಿಗಳು, ಎಎಸ್ಪಿ, ಡಿವೈಎಸ್‌ಪಿ, ಇನ್ಸಪೆಕ್ಟರ್‌ಗಳು ಹಾಗೂ ನಗರ ಪೊಲೀಸ್ ಕಮಿಷನರೇಟ್‌ನ ಡಿಸಿಪಿ, ಎಸಿಪಿ ಹಾಗೂ ಪಿಐಗಳು ಸೇರಿದಂತೆ ಒಟ್ಟು 200ಕ್ಕೂ ಅಧಿಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.