ಜಿಲ್ಲೆ

ಬೆಳಗಾವಿ ಗೃಹಲಕ್ಷ್ಮೀಯರಿಗೆ 172 ಕೋಟಿ ರೂ.ಜಮೆ

ಬೆಳಗಾವಿ : ಮೈಸೂರಿನಲ್ಲಿ ಆ.30ರಂದು ಲೋಕಾರ್ಪಣೆಗೊಳ್ಳಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಲೋಕಾರ್ಪಣೆಗೊಳಿಸಲು ಬೆಳಗಾವಿ ತಾಲೂಕು ಹಿರೇಬಾಗೆವಾಡಿಯ ಶಿವಾಲಯ ಕಲ್ಯಾಣ ಮಂಟಪ ಹಾಗೂ ಬೆಳಗಾವಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 500 ಗ್ರಾಮ ಪಂಚಾಯತಿಗಳಲ್ಲಿ ಹಾಗೂ 39 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗುತ್ತಿದೆ.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಕುಟುಂಬದ ನಿರ್ವಹಣೆಯ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು  2000 ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 1187469 ಮಹಿಳೆಯರು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಇಲ್ಲಿಯವರೆಗೆ 9,97,460 ಕುಟುಂಬದ ಯಜಮಾನಿ ಮಹಿಳೆಯರು ನೊಂದಣಿಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇಕಡಾ 84.00% ರಷ್ಟು ಸಾಧನೆ ಮಾಡಲಾಗಿದೆ.  

ಜಿಲ್ಲೆಗೆ ಮೊದಲ ಹಂತದಲ್ಲಿ 195.63 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಇಲ್ಲಿಯವರೆಗೆ 172.00 ಕೋಟಿ ಆರ್ಥಿಕ ಸಾಧನೆ ಸಾಧಿಸಲಾಗಿದೆ. ಒಟ್ಟು 8,60,000 ಫಲಾನುಭವಿಗಳಿಗೆ 2000 ರೂ.ಗಳ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್.ನಾಗರಾಜ ತಿಳಿಸಿದ್ದಾರೆ.  

ಇನ್ನು  ಮೈಸೂರಿನಿಂದ ಕಾರ್ಯಕ್ರರ್ಮದ ನೇರ ಪ್ರಸಾರವನ್ನು ವೀಕ್ಷಿಸಲು ಜಿಲ್ಲಾದ್ಯಂತ ಸಾರ್ವಜನಿಕರು ವೀಕ್ಷಿಸಲು ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ಒಂದು ಟಿವ್ಹಿ/ಎಲ್.ಇ.ಡಿ ಪರದೆ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ 2000 ಫಲಾನುಭವಿಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.