ಜಿಲ್ಲೆ

ವರದಿ ಆಧರಿಸಿ ಬೆಳಗಾವಿ ಜಿಲ್ಲೆ ವಿಭಜಿಸಲಿ

ಜಗದೀಶ ಹೊಂಬಳಿ

ಬೆಳಗಾವಿ: ಹಿಂದಿನ ಸರ್ಕಾರಗಳು ನೇಮಿಸಿದ್ದ ಆಯೋಗಗಳು ನೀಡಿರುವ ವರದಿಗಳ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರ, 2 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಆಡಳಿತ ದೃಷ್ಟಿಯಿಂದ ಬೆಳಗಾವಿ ಮೂರು ಜಿಲ್ಲೆಗಳಾಗಿ ವಿಭಜನೆಯಾಗಬೇಕು. ಜಿಲ್ಲೆ ವಿಭಜನೆ ಬಗ್ಗೆ ಯಾವುದೆ ಗೊಂದಲವಿದ್ದರೂ ಹಿಂದಿನ ವರದಿಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಜಿಲ್ಲೆಗಳ ರಚನೆ ಮಾಡಬೇಕು. ಈ ಹಿಂದೆ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ವಿಭಜನೆ ಪ್ರಸ್ತಾಪ ಮಾಡಿದ್ದರು. ಆದರೆ, ಮರಾಠಿಗರ ಪ್ರಾಬಲ್ಯದ ನೆಪ ಮಾಡಿಕೊಂಡು ಜಿಲ್ಲೆಗಳು ರಚನೆ ಆಗಲಿಲ್ಲ. ಈಗ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹಾಗಾಗಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆ ಮಾಡಬೇಕು ಎಂದರು.

ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಜಿಲ್ಲೆ ಮಾಡುತ್ತ ಹೋಗುವುದರಲ್ಲಿ ಅರ್ಥವಿಲ್ಲ. ಆಯೋಗಗಳ ವರದಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಜಿಲ್ಲೆಯ ನಾಯಕರು ಒಮ್ಮತಕ್ಕೆ ಬರುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ, ಸರ್ಕಾರವು ವಿಭಜನೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮಳೆಯಿಂದಾಗಿ ಮನೆ ಬಿದ್ದಿರುವ ಬಗ್ಗೆ ಸರಿಯಾಗಿ ಸರ್ವೇ ಆಗುತ್ತಿಲ್ಲ. ಹೀಗಾಗಿ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಸಿಗುವುದು ಕಷ್ಟವಾಗುತ್ತದೆ. ಪ್ರವಾಹ ಬಂದಾಗ ನದಿ ತೀರದ ರೈತರು ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.