ಜಿಲ್ಲೆ

13ಕ್ಕೆ ಅತಿಥಿ ಶಿಕ್ಷಕರಿಂದ ಬೆಳಗಾವಿ ಚಲೋ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಗುಡಿಬಂಡೆ ತಾಲೂಕು ಘಟಕದಿಂದ ಬೆಂಬಲ

ಗುಡಿಬಂಡೆ: ವೇತನ ಹೆಚ್ಚಳ ಮತ್ತು ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘದಿಂದ ಡಿ.13ಕ್ಕೆ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ತಾಲೂಕು ಘಟಕ ಬೆಂಬಲ ೋಷಿಸಿದೆ.

ಈ ಕುರಿತು ಪತ್ರಿಕೆ ತಿಳಿಸಿರುವ ಸಂಘದ ತಾಲೂಕು ಅಧ್ಯಕ್ಷೆ ಅರುಣಾ, ಎಲ್ಲ ಶಿಕ್ಷಕರಂತೆ ನಾವೂ ಕೆಲಸ ಮಾಡುತ್ತಿದ್ದೇವೆ. ಆದರೆ ಸರ್ಕಾರ ಅತಿಥಿ ಶಿಕ್ಷಕರನ್ನು ಕೀಳಾಗಿ ನೋಡುತ್ತಿದೆ. ಸರಿಯಾಗಿ ಗೌರವಧನ ನೀಡುತ್ತಿಲ್ಲ. ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡಬೇಕು ಮತ್ತು ಸೇವಾಭದ್ರತೆ ಒದಗಿಸಬೇಕು. ಕಾಯಂ ಶಿಕ್ಷಕರಂತೆ ಬೇಸಿಗೆ ರಜೆ ಸೇರಿ 12 ತಿಂಗಳು ವೇತನ ನೀಡುವ ಜತೆಗೆ ಸೇವೆ ಮುಂದುವರಿಸಿ ನೇಮಕಾತಿಯಲ್ಲಿ ಪ್ರತಿವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡಬೇಕು. ಅತಿಥಿ ಶಿಕ್ಷಕ ಎನ್ನುವುದಕ್ಕೆ ಬದಲಾಗಿ ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎಂದು ನಮೂದಿಸಬೇಕು. ಕಾಯಂ ಶಿಕ್ಷಕರಂತೆ ನಮಗೂ ಸ್ಥಾನಮಾನ ಹಾಗೂ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು ಹಾಗೂ ಜೀವ ವಿಮೆ ಸೌಲಭ್ಯ ಒದಗಿಸಬೇಕು ಎಂಬುದು ಆಗ್ರಹವಾಗಿದ್ದು, ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಬೆಳಗಾವಿ ಚಲೋ ಕಾರ್ಯಕ್ರಮಕ್ಕೆ ಎಲ್ಲ ಅತಿಥಿ ಶಿಕ್ಷಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್ಲಪ್ಪ, ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಮಹಾಲಕ್ಷ್ಮೀ, ರೋಜಾ, ರಾಧಾ, ಶಿಲ್ಪಾ, ಶ್ರೀಮತಿ, ಮೀನಾ, ಗಜೇಂದ್ರ, ಶಿವಶಂಕರ್, ಭವ್ಯಾ, ರಾಜೇಶ್, ಗೌತಮಿ, ಸುಷ್ಮಾ, ಚಂದ್ರಮ್ಮ ಮುಂತಾದವರು ಹಾಜರಿದ್ದರು.