ರವಿ ಗೋಸಾವಿ ಬೆಳಗಾವಿ: ಸೈಕಲ್, ಬೈಕ್, ಕಾರು ಸೇರಿ ವಿವಿಧ ಹೆಸರಾಂತ ಕಂಪನಿಗಳ ವಾಹನಗಳಿಗೂ ಬಿಡಿಭಾಗ ಪೂರೈಸುವ ಇಲ್ಲಿನ ಕೈಗಾರಿಕೆಗಳು ಇದೀಗ ಚಂದ್ರಯಾನ-3 ಉಪಗ್ರಹಕ್ಕೆ ಬಿಡಿಭಾಗ (ಸೆನ್ಸರ್) ಪೂರೈಸುವುದರ ಜತೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಇಂಜಿನಿಯರಿಂಗ್ ಸರಕುಗಳನ್ನು ವಿದೇಶಗಳಿಗೆ ರಪ್ತು ಮಾಡುವ ಬೆಳಗಾವಿ ಜಿಲ್ಲೆಗೆ ಆಟೋಮೊಬೈಲ್ಸ್ ಕ್ಯಾಪಿಟಲ್, ಆಟೋಮೊಬೈಲ್ಸ್ ಹಬ್ ಎಂಬ ಖ್ಯಾತಿ ಇದೆ.
ರಾಜ್ಯದಲ್ಲಿ ಒಟ್ಟು 8.80 ಲಕ್ಷ ಸಣ್ಣ ಕೈಗಾರಿಕೆಗಳಿದ್ದರೆ, ಬೆಳಗಾವಿ ಜಿಲ್ಲೆಯೊಂದರಲ್ಲೇ 71,600ಕ್ಕೂ ಅಧಿಕ ಸಣ್ಣ ಕೈಗಾರಿಕೆಗಳಿವೆ. ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ಗೋವಾದ ಪಣಜಿ ಬಂದರಿಗೆ ಸಮೀಪದಲ್ಲಿರುವ ಬೆಳಗಾವಿ ಮಹಾನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾಯ್ದಿರುವುದರಿಂದ ವರ್ಷದಿಂದ ವರ್ಷಕ್ಕೆ ಕೈಗಾರಿಕೆಗಳ ಸಂಖ್ಯೆ ಏರುತ್ತಲೇ ಇದೆ. ಕಳೆದೊಂದು ವರ್ಷದಲ್ಲಿ 20 ಸಾವಿರಕ್ಕೂ ಅಧಿಕ ಹೊಸ ಉದ್ಯಮಗಳು ಕಾರ್ಯಾರಂಭ ಮಾಡಿವೆ. ಅಷ್ಟೇ ಪ್ರಮಾಣದಲ್ಲಿ ಹೂಡಿಕೆಯೂ ಹರಿದುಬರುತ್ತಿದ್ದು, ಲಕ್ಷಾಂತರ ಉದ್ಯೋಗಾವಕಾಶಗಳ ಜತೆಗೆ ಅಸಂಖ್ಯಾತ ಉದ್ಯಮಗಳೂ ಸೃಷ್ಟಿಯಾಗುತ್ತಿವೆ.
ಇಂಜಿನಿಯರಿಂಗ್, ಏರೋಸ್ಪೇಸ್ ಕೈಗಾರಿಕೆಗಳಲ್ಲಿ ಹೆಚ್ಚಿನ ಅವಕಾಶ ಹೊಂದಿರುವ ಬೆಳಗಾವಿಯಲ್ಲಿ ಮೆಕಾನಿಕಲ್, ಕಾಸ್ಟಿಂಗ್, ಹೈಡ್ರೋಲಿಕ್ಸ್, ವಾಲ್ಸ್, ಕ್ರಾಂಕ್‌ಶಾಪ್ ಕೈಗಾರಿಕೆಗಳು ಅತ್ಯಧಿಕ ಸಂಖ್ಯೆಯಲ್ಲಿವೆ. ಫೌಂಡ್ರಿ ಕ್ಲಸ್ಟರ್, ಆಟೋ ಕ್ಲಸ್ಟರ್, ಟೆಕ್ಸ್‌ಟೈಲ್ ಕ್ಲಸ್ಟರ್, ಕಾಫರಯುಟಿಕ್ ಕ್ಲಸ್ಟರ್ ಹಾಗೂ ಪವರ್‌ಲೂಮ್ ಕ್ಲಸ್ಟರ್‌ಸೇರಿ ಹಲವು ಕ್ಲಸ್ಟರ್ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿನ ಸಣ್ಣ ಕೈಗಾರಿಕೆಗಳಲ್ಲಿಯೇ 7.10 ಲಕ್ಷ ಕಾರ್ಮಿಕರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಲಭಿಸಿದ್ದು, ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಕೈಗಾರಿಕೆ ಹೊಂದಿರುವುದು ಬೆಳಗಾವಿ ಮಾತ್ರ.
25ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳೂ ಇರುವುದರಿಂದ ಬಿಡಿಭಾಗಗಳಿಗೆ ಬೇಡಿಕೆ ಹೆಚ್ಚಿದ್ದು, ಸಾಕಷ್ಟು ಸಣ್ಣ ಕೈಗಾರಿಕೆಗಳೂ ಹುಟ್ಟಿಕೊಂಡಿದ್ದು, ಆಟೋಮೊಬೈಲ್ಸ್ ಹಾಗೂ ಇನ್ನಿತರ ಕೈಗಾರಿಕೆಗಳಿಗೆ ಬಲ ತುಂಬಲು ಪ್ರಾಥಮಿಕ ಸೌಲಭ್ಯವಾಗಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ಭೂಮಿಯ ಅವಶ್ಯಕತೆ ಇದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಭೂಮಿ ಲಭಿಸುತ್ತಿಲ್ಲ. ಹೀಗಾಗಿ, ಸಾಕಷ್ಟು ಕೈಗಾರಿಕೆಗಳು ಜಾಗದ ಸಮಸ್ಯೆಯಿಂದಾಗಿಯೇ ಮುಚ್ಚಲ್ಪಡುತ್ತಿವೆ ಎನ್ನುವುದು ಉದ್ಯಮಿಗಳ ಅಳಲು.
ನಗರ ಸಮೀಪದಲ್ಲೇ ಭೂಮಿ ನೀಡಲಿ: ಸರ್ಕಾರ ಬೆಳಗಾವಿಯಿಂದ ಸಾಕಷ್ಟು ದೂರುದಲ್ಲಿ ಕಣಗಲಾ, ಹೊನಗಾ ಹಾಗೂ ಕಿತ್ತೂರು ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಭೂಮಿ ಒದಗಿಸುತ್ತಿದೆ. ರೈಲು, ರಸ್ತೆ ಹಾಗೂ ವಿಮಾನ ಸಂಪರ್ಕಕ್ಕೆ ಆ ಪ್ರದೇಶಗಳು ದೂರುವಾಗುತ್ತಿರುವುದರಿಂದ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಬೆಳಗಾವಿ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕಾ ಪ್ರದೇಶ ಒದಗಿಸಿದರೆ ಕೈಗಾರಿಕೆ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎನ್ನುತ್ತಾರೆ ಬೆಳಗಾವಿ ಸಣ್ಣ ಮತ್ತು ಮದ್ಯಮ ಕೈಗಾರಿಕೋದ್ಯಮಿಗಳ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ರೋಹನ್ ಜವಳಿ.
ಖಾಸಗಿ ಕೈಗಾರಿಕಾ ಪ್ರದೇಶಕ್ಕೂ ಇದೆ ಅನುಮತಿ: ಕೈಗಾರಿಕೆಗಳಿಗೆ ಸರ್ಕಾರವೇ ಭೂಮಿ ಒದಗಿಸಬೇಕು ಎಂದೇನಿಲ್ಲ. ಖಾಸಗಿಯಾಗಿಯೂ ಏರ್ಪಾಡು ಮಾಡಿಕೊಳ್ಳಬಹುದು. ಆದರೆ, ಕನಿಷ್ಠ 100 ಎಕರೆ ಭೂಮಿ ಕೈಗಾರಿಕೋದ್ಯಮಕ್ಕೆ ಮೀಸಲಿಟ್ಟರೆ ಸರ್ಕಾರವೇ ವಿವಿಧ ರಿಯಾಯಿತಿ ಸೌಲಭ್ಯಗಳನ್ನು ನೀಡಿ, ಖಾಸಗಿ ಕೈಗಾರಿಕಾ ವಲಯಗಳನ್ನು ಪ್ರೋತ್ಸಾಹಿಸುತ್ತದೆ. ಈಗಾಗಲೇ ಬೆಳಗಾವಿಯಲ್ಲಿ ಹಲವಾರು ಖಾಸಗಿ ಕೈಗಾರಿಕಾ ಪ್ರದೇಶಗಳಿದ್ದವು. ಆದರೆ, ಅವುಗಳ ಸಮೀಪದಲ್ಲಿಯೇ ಜನವಸತಿಗೂ ಅವಕಾಶ ನೀಡಿದ್ದರಿಂದ ಇದೀಗ ಜನ ವಸತಿ ಪ್ರದೇಶದಲ್ಲಿ ಹಲವು ಕೈಗಾರಿಕೆಗಳನ್ನು ನಡೆಸಲು ಆಕ್ಷೇಪಗಳು ಬರುತ್ತಿದ್ದರಿಂದ ಕೆಲವು ಕೈಗಾರಿಕೆಗಳು ಬೇರೆಡೆ ಸ್ಥಳಾಂತರಗೊಂಡಿವೆ. ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳ ಸಂಖ್ಯೆ ಹೆಚ್ಚಿರುವುದರಿಂದ ಕೈಗಾರಿಕೆಗೆ ಅಗತ್ಯ ಕೌಶಲ್ಯಯುತ ಪದವಿಧರರ ಲಭ್ಯತೆ ಹೆಚ್ಚಿರುವುದರಿಂದ ನವೋದ್ಯಮಿಗಳ ಯಶಸ್ಸಿನ ಪ್ರಮಾಣವೂ ಹೆಚ್ಚಿದೆ ಎನ್ನುತ್ತಾರೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್.
ಅತಿ ಹೆಚ್ಚು ಇಂಜಿನಿಯರಿಂಗ್ ಗೂಡ್ಸ್ ರಫ್ತು ಮಾಡುತ್ತಿರುವ ಬೆಳಗಾವಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಳೆಯಲು ಹೆಚ್ಚು ಅವಕಾಶಗಳಿವೆ. ಕೈಗಾರಿಕಾ ಪ್ರದೇಶಗಳಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸುವುದರ ಜತೆಗೆ ಬೃಹತ್ ಪ್ರಮಾಣದಲ್ಲಿ ಅಗತ್ಯ ಭೂಮಿ ನೀಡಿ ದೊಡ್ಡ ಉದ್ಯಮಗಳನ್ನು ಆಕರ್ಷಿಸಬೇಕು.ರೋಹನ್ ಜವಳಿ ನಿಕಟಪೂರ್ವ ಅಧ್ಯಕ್ಷ, ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಅಸೋಸಿಯೇಷನ್, ಬೆಳಗಾವಿ