ಮಂಗಳೂರು: ಡಿ.9 ರಿಂದ 19ರವರೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅವೇಶನ ನಡೆಯಲಿದೆ. ಡಿ.9ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಬಿಸಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಈ ಬಾರಿಯ ಅವೇಶನದ ಮುಖ್ಯಾಂಶಗಳ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವೇಶನದಲ್ಲಿ ರಾಜ್ಯದ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದ ಜನತೆಯ ಹಿತದೃಷ್ಟಿಯಿಂದ ಚರ್ಚೆ, ಕಲಾಪಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅವೇಶನದಲ್ಲಿ ಉತ್ತಮ ಅಂಶಗಳ ಚರ್ಚೆಯಾಗಬೇಕು. ಆಡಳಿತ ಪಕ್ಷ ಹಾಗೂ ವಿಪಕ್ಷಗಳು ತಮ್ಮ ವಿವಿಧ ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಬೇಕು. ಸದನದ ಕಲಾಪ ರಾಜಕೀಯ ವಿಚಾರಗಳಿಗೆ ಬಳಕೆಯಾಗಬಾರದು ಎಂದು ಸ್ಪೀಕರ್ ಯು.ಟಿ.ಖಾದರ್ ನುಡಿದರು.
ವಕ್ ಸೇರಿದಂತೆ ವಿವಿಧ ವಿವಾದಿತ ವಿಚಾರಗಳ ಚರ್ಚೆಗೆ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ನಿಯಮಾನುಸಾರ ಏನೆಲ್ಲ ಅವಕಾಶ ನೀಡಬೇಕೋ ಅದನ್ನು ನೀಡುತ್ತೇನೆ. ಅದು ನನ್ನ ಜವಾಬ್ದಾರಿ ಎಂದರು.