ಜಿಲ್ಲೆ

15 ದಿನದಲ್ಲಿ ಬೆಳೆ ಪರಿಹಾರ ಬಿಡುಗಡೆ: ಪ್ರಿಯಾಂಕ್ ಖರ್ಗೆ

ರಮೇಶ ಮೇಳಕುಂದಾ

ಕಲಬುರಗಿ: ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಅತಿವೃಷ್ಟಿ ಮತ್ತು ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ‌ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಮುಂದಿನ‌ 10-15 ದಿನದಲ್ಲಿ ರಾಜ್ಯ ಸರ್ಕಾರದಿಂದ ಮೊದಲನೇ ಕಂತಿನ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಎನ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಎಸ್.ಡಿ.ಆರ್.ಎಫ್ ನಿಧಿಯಡಿ 8,500 ರೂ. ಪರಿಹಾರ ನೀಡಲಾಗುವುದು ಎಂದು ಕಳೆದ‌ ಸೆಪ್ಟೆಂಬರ್ 30 ರಂದು ಇಲ್ಲಿಯೇ ಮುಖ್ಯಮಂತ್ರಿಗಳು ಘೋಷಿಸಿದ್ದು, ಅದರಂತೆ ಹಣ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ ಎಂದರು.

ಪ್ರಾಥಮಿಕ ಅಂದಾಜಿನ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 3,24,777 ಹೆಕ್ಟೆರ್ ಬೆಳೆ ಹಾನಿಯಾಗಿದ್ದೆ ಎಂದು ಅಂದಾಜಿಸಲಾಗಿತ್ತಾದರು ಜಂಟಿ ಸಮೀಕ್ಷೆಯಿಂದ 3,07,206 ಹೆಕ್ಟೇರ್ ಹಾನಿಯಾಗಿದ್ದು ಕಂಡುಬಂದಿದೆ. ಬೆಳೆ ಹಾನಿ ಕುರಿತು ಪರಿಹಾರ ಪೋರ್ಟಲ್ ನಲ್ಲಿ ದಾಖಲಾದ 4,17,596 ರೈತರ ಪೈಕಿ ಶುಕ್ರವಾರದ ವರೆಗೆ 4,15,996 ಅನುಮೋದನೆ ನೀಡಿದೆ. ತಾಂತ್ರಿಕ ಮತ್ತು ನಾನಾ ಕಾರಣದಿಂದ‌ 1,148 ತಿರಸ್ಕೃತಗೊಂಡಿದ್ದು, 1,006 ಅನುಮೋದನೆಗೆ ಬಾಕಿ ಇವೆ ಎಂದು‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಶಾಸಕರಾದ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಎಮ್. ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಇದ್ದರು.