ಬೆಳವಡಿ ಗ್ರಾಮವನ್ನು ಹೋಬಳಿಯಾಗಿ ಘೋಷಿಸುವಂತೆ ಒತ್ತಾಯಿಸಿ ಎಸಿ ಶಿವಾನಂದ ಭಜಂತ್ರಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಿ.ಎಸ್. ಚಿಕ್ಕನಗೌಡರ, ಶಂಕರ ಕರೀಕಟ್ಟಿ ವೀರನಗೌಡ ಪಾಟೀಲ ಇತರರು ಇದ್ದರು. 
ಜಿಲ್ಲೆ

ಬೆಳವಡಿಗೆ ಹೋಬಳಿ ಸ್ಥಾನ ನೀಡಿ

ಬೈಲಹೊಂಗಲ: ತಾಲೂಕಿನ ಬೆಳವಡಿಯು 28 ಗ್ರಾಮಗಳ ಕೇಂದ್ರ ಸ್ಥಾನವಾಗಿದ್ದು ಇದನ್ನು ಹೋಬಳಿ ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರ ಮೂಲಕ ಸರ್ಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.

ಹಿರಿಯ ವಕೀಲ ಸಿ.ಎಸ್. ಚಿಕ್ಕನಗೌಡರ ಮಾತನಾಡಿ, ವಿಶ್ವದಲ್ಲಿಯೇ ಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರವನಿತೆ ಬೆಳವಡಿ ಮಲ್ಲಮ್ಮ ಶಿವಾಜಿ ಸೈನಿಕರನ್ನು ಸೋಲಿಸಿದಳು.

ಶಿವಾಜಿ ಅವರು ಮಲ್ಲಮ್ಮಳನ್ನು ಸಹೋದರಿ ಎಂದು ಸ್ವೀಕಾರ ಮಾಡಿದರು. ಪ್ರತಿ ವರ್ಷ ಮಲ್ಲಮ್ಮಳ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಅಂತಹ ವೀರಮಾತೆಯ ನಾಡು ಹೋಬಳಿಗಾಗಿ ಯೋಗ್ಯ ಸ್ಥಳವಾಗಿದ್ದು, 18 ಸಾವಿರ ಜನಸಂಖ್ಯೆ ಹೊಂದಿದ ಇಲ್ಲಿ, ಸುತ್ತಲಿನ ಗ್ರಾಮಸ್ಥರಿಗಾಗಿ ನಾಡ ಕಚೇರಿ ಪ್ರಾರಂಭಿಸುವುದರಿಂದ ರೈತರಿಗೆ, ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಗೆ ತುಂಬಾ ಅನುಕೂಲವಾಗಲಿದೆ. ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಂಕರ ಕರೀಕಟ್ಟಿ, ಸೋಮೇಶ ಕರೀಕಟ್ಟಿ, ವೀರನಗೌಡ ಪಾಟೀಲ, ಶಿವಾನಂದ ಪಾಟೀಲ, ಅಶೋಕ ಮುರಗೋಡ ಇದ್ದರು.