ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಧರ್ಮಸ್ಥಳ ಸುತ್ತಲಿನ ಸ್ಥಳಗಳಲ್ಲಿ ಜರುಗಿದ ಅಸಹಜ ಸರಣಿ ಸಾವುಗಳ ಕುರಿತು ಉನ್ನತ ತನಿಖೆ ನಡೆಸಿ ತಪ್ಪಿಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಆ.೨೭ ರಂದು ಬೆಳ್ತಂಗಡಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಸುತ್ತಲಿನ ಅಸಹಜ ಸಾವುಗಳು ಹಾಗೂ ಕಲಬುರಗಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಜರುಗಿದ ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಪೊಲೀಸರು ಇನ್ನೂ ಪತ್ತೇ ಮಾಡಿಲ್ಲ. ಕೇಸ್‌ಗಳನ್ನು ಬೇಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಮುದಾಯದ ಮತ್ತು ಹೆಣ್ಮುಕ್ಕಳ ಸಮಸ್ಯೆಗಳನ್ನು ಮುಂದಿರಿಸಿಕೊAಡು ರಾಜ್ಯಮಟ್ಟದ ಹೋರಾಟಕ್ಕೆ ಬೆಳ್ತಂಗಡಿ ಚಲೋ ಹೋರಾಟ ಹಾಕಿಕೊಳ್ಳಲಾಗಿದೆ. ಆ.೨೮ ರಂದು ಸೌಜನ್ಯಗಳ ಹುಟ್ಟೂರು ಧರ್ಮಸ್ಥಳ ಸಮೀಪದ ಪಾಂಗಳಕ್ಕೆ ಭೇಟಿ ನೀಡಿ ಅಲ್ಲಿಯೇ ಮಹಾಧರಣಿ ನಡೆಸಲಾಗುವುದು ಎಂದು ತಿಳಿಸಿದರು.
೧೧ ವರ್ಷಗಳ ಹಿಂದೆ ಸೌಜನ್ಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆದರೆ, ಕೆಲವರು ಸೇರಿಕೊಂಡು ತನಿಖೆಯ ಧಿಕ್ಕು ತಪ್ಪಿಸುವಂತೆ ಮಾಡಿದರು. ಹೀಗಾಗಿ ಈ ಪ್ರಕರಣ ಇನ್ನೂ ಸ್ಪಷ್ಟತೆ ಹೊರ ಬರುತ್ತಿಲ್ಲ. ಇನ್ನೂ ಸಿಬಿಐ ತನಿಖೆಯು ಸರಿಯಾಗಿ ನಡೆಯಲಿಲ್ಲ.ಆರೋಪಿತರು ಖುಲಾಸೆಗೊಂಡರು. ಆದರೆ, ಆಕೆಯ ಕೊಲೆ ಮಾಡಿದವರು ಯಾರು ಎಂಬುದು ಜನತೆಗೆ ಗೊತ್ತಾಗಬೇಕಲ್ಲ ಎಂದರು.
ಯುವತಿ ಮತ್ತು ಬಾಲಕಿಯರ ಹತ್ಯಾಚಾರ ಪ್ರಕರಣಗಳ ತನಿಖೆ ವಿಳಂಭ ಮಾಡಬಾರದು. ತಪ್ಪಿಸ್ಥರನ್ನು ಪತ್ತೆ ಮಾಡಬೇಕು. ಹತ್ಯಾಚಾರಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಸೌಜನ್ಯಳ ಕುಟುಂಬದವರು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಆಕೆಯ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಡಾ.ಬಾಳಿ ಆಗ್ರಹಿಸಿದರು.
==