ಮಳವಳ್ಳಿ: ತಾಲೂಕಿನ ಬೆಳಕವಾಡಿ ಗ್ರಾಮದ ಶಿವಕುಮಾರಸ್ವಾಮಿ ಕಾಲೇಜು ಸಮೀಪವಿರುವಶ್ರೀ ಚಾಮುಂಡೇಶ್ವರಿ ದೇವಸ್ಥಾನದ ರಾಜಗೋಪುರ ಹಾಗೂ ಚಾಮುಂಡೇಶ್ವರಿ, ಮಹಾಗಣಪತಿ, ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಆವರಣದಲ್ಲಿ ಸೋಮವಾರದಿಂದಲೇ ವಿವಿಧ ಹೋಮ, ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಅರ್ಚಕ ವೃಂದದವರು ನೆರವೇರಿಸಿದ್ದು ವಿಶೇಷವಾಗಿತ್ತು. ಗ್ರಾಮದ ಯಜಮಾನರು ಹಾಗೂ ಪ್ರಮುಖರು ಕಾವೇರಿ ನದಿ ತೀರದಲ್ಲಿ ಅಮ್ಮನವರ ಮೂರ್ತಿ ಹಾಗೂ ಶಿವನಸಮುದ್ರ ಮಾರಮ್ಮನಿಗೆ ಸತ್ತಿಗೆಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಿದರು.ನಂತರ ಹೂ-ಹೊಂಬಾಳೆಯೊಂದಿಗೆ ಬಿ.ಜಿ.ಪುರ ಮಂಟೇಸ್ವಾಮಿ ಮಠದ ಬಸವಪ್ಪ ಜತೆಗೂಡಿ ಹಾಲರವಿ ಹೊತ್ತ ಸುಮಂಗಲಿಯರು ಮಂಗಳವಾದ್ಯದೊಡನೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿ ನಡೆಸಿದರು.ಗೋಧೂಳಿ ಲಗ್ನದಲ್ಲಿ ಮೆರವಣಿಗೆ ಚಾಮುಂಡೇಶ್ವರಿ ಆಲಯ ಪ್ರವೇಶ ಮಾಡಿತು. ಇದೇ ವೇಳೆ ಬಲಿಪೂಜೆ, ಗೋವು, ಲಕ್ಷ್ಮೀ, ಗಣಪತಿ ಪೂಜೆಗಳನ್ನು ನೆರವೇರಿಸಲಾಯಿತು. ನಂತರ ಪುಣ್ಯಾಹ, ಸ್ವಸ್ತಿ ವಾಚನ, ಪಂಚಗವ್ಯ, ದೇವನಾಂದಿ, ರಕ್ಷಾಬಂಧನ, ಕಳಸ ಪೂಜೆ, ಅಗ್ನಿಮುಖ ಪ್ರಯೋಗ ಹಾಗೂ ವಿವಿಧ ಹೋಮಗಳ ನಂತರ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಬ್ರಾಹ್ಮೀ ಮುಹೂರ್ತದಲ್ಲಿ ದುರ್ಗಾ ಹೋಮ: ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಧಾನ ದುರ್ಗಾ ಹೋಮ, ಮಹಾಪೂರ್ಣಾಹುತಿ, ದೇವಿಗೆ ಪಂಚಾಮೃತ ಅಭಿಷೇಕ, ಗೋಪುರಕ್ಕೆ ಕುಂಭಾಭಿಷೇಕ ಹಾಗೂ ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ ನೆರವೇರಿತು. ನಂತರ ವಿಗ್ರಹಗಳಿಗೆ ಅಲಂಕಾರ ಮಾಡಿ ಧೂಪ, ದೀಪ ನೈವೇದ್ಯ, ಮಹಾಮಂಗಳಾರತಿ ಮಾಡಲಾಯಿತು. ಪ್ರಧಾನ ಅರ್ಚಕರು ನೂರಾರು ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ ಮಾಡಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೆಳಕವಾಡಿ ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.