ಜಿಲ್ಲೆ

ಪಾಳೇಗಾರರ ಆಡಳಿತ ಕಂಡ ಬಿಳಗುಂಬ!

*ಸಿರಿಧಾನ್ಯ ಬೆಳೆದು ಮಾರುಕಟ್ಟೆ ಸೃಷ್ಟಿಸಿಕೊಂಡ ರೈತರು

* ವೀರಗಲ್ಲು ಮಾಸ್ತಿಗಲ್ಲು ಸಾಕ್ಷಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ರಾಜಮಹಾರಾಜರ ಕಾಲದಲ್ಲಿ ಬಿಲ್ಲವ ಎಂಬ ಪಾಳೇಗಾರನ ಆಳ್ಳಿಕೆಗೆ ಒಳಪಟ್ಟು, ಆಡಳಿತ ಕೇಂದ್ರವಾಗಿ ನೂರಾರು ವರ್ಷಗಳ ಇತಿಹಾಸವಿರುವ ರಾಮನಗರ ತಾಲೂಕಿನ ಕಸಬಾ ಹೋಬಳಿಯ ಬಿಳಗುಂಬ ಗ್ರಾಮ ಹಲವು ವೈಶಿಷ್ಟ್ಯ ಸಾಕ್ಷಿಯಾಗಿದೆ.

ಬಿಳಗುಂಬ ಸುಂದರ ಪ್ರಕೃತಿ ವನಸಿರಿ ಮಧ್ಯೆ ಹಚ್ಚ ಹಸಿರು ತುಂಬಿ ಸುತ್ತಲೂ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಇತಿಹಾಸ ಹೇಳುತ್ತಾ ಎಲ್ಲ ವರ್ಗದ ಸೌಹಾರ್ದ ಬದುಕಿಗೆ ಸಾಯಾಗಿದೆ. ಅಂತೆಯೇ, ರಾಜಕೀಯ, ಧಾರ್ಮಿಕ, ಶೈಕ್ಷಣಿಕವಾಗಿ ಮುನ್ನೆಲೆಯಲ್ಲಿರುವ ಗ್ರಾಮವಾಗಿದೆ.

ಪಾಳೇಗಾರರ ಆಳ್ವಿಕೆಯ ಕಾಲಟ್ಟದಲ್ಲಿ ಎಲ್ಲ ವರ್ಗದ ಜನರು ಸೌಹಾರ್ದದಿಂದ ಬದುಕು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ.

ರಾಮನಗರ ಜಿಲ್ಲಾ ಕೇಂದ್ರದಿಂದ ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, 5 ಕಿಮೀ ಅಂತರದಲ್ಲಿದೆ. ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಸಾಯಾಗಿ ವೀರಗಲ್ಲು ಮಾಸ್ತಿಗಲ್ಲುಗಳಿವೆ. ಪಾಳೇಗಾರರ ಕಾಲಟ್ಟದಲ್ಲಿ ಜನರು ವಾಸಿಸುತ್ತಿದ್ದ ಬಂಬತ್ತಿ ಗುಡಿ ಬೈಲು, ಮಟವಾಡಿ ಬೈಲು, ಪರಿಚಾರಿಕೆ ಬೈಲು, ಶಿವನಗಿರಿಬೆಟ್ಟ, ಜಲಸಿದ್ದೇಶ್ವರ ಬೆಟ್ಟ, ಬಸವನಕಲ್ಲು ಬೆಟ್ಟ, ಕೋಣಮುರುಕನಕಲ್ಲು, ದೊಡ್ಡಿ ಬೈಲು ಸ್ಥಳಗಳಿದ್ದು, ಈಗಲೂ ಪ್ರಚಲಿತದಲ್ಲಿವೆ.

ಮಣ್ಣಿನ ಬೀದಿ ರಸ್ತೆ, ಎತ್ತ ನೋಡಿದರೂ ನಾಡಹೆಂಚು, ಮಣ್ಣಿನ ಗೋಡೆಗಳಿಂದ ಕೂಡಿದ ಮನೆಗಳು ಈಗ ಕಾಂಕ್ರೀಟ್​ ಮನೆಗಳಾಗಿವೆ. ಬೀದಿ ರಸ್ತೆಗಳಲ್ಲಿ ಸಿಮೆಂಟ್​ ಕಂಡು ಸುಂದರ ಗ್ರಾಮವಾಗಿ ಬೆಳೆಯುತ್ತಿದೆ. ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಮಾವು, ತೆಂಗು ಪ್ರಮುಖ ವಾಣಿಜ್ಯ ಬೆಳೆ. ರೇಷ್ಮೆ, ರಾಗಿ ಪ್ರಮುಖ ಬೆಳೆ. ಕೆಲವು ರೈತರು ಸಿರಿಧಾನ್ಯ ಬೆಳೆದು ಮಾರುಕಟ್ಟೆಯನ್ನೂ ಸೃಷ್ಟಿಸಿಕೊಂಡಿದ್ದಾರೆ.

ಕೈಹಿಡಿದ ಹೈನುಗಾರಿಕೆ:

ಗ್ರಾಮದಲ್ಲಿ 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಮಾವು ಬೆಳೆ ಹೆಚ್ಚಿರುವ ಕಾರಣ ಸಾಕಷ್ಟು ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಗ್ರಾಮದಲ್ಲಿ ಹಾಲಿನ ಡೇರಿ, ಹಾಲು ಶಿಥಲೀಕರಣ ಕೇಂದ್ರವಿರುವುದು ವರದಾನವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಎರಡು ಅಂಗನವಾಡಿಗಳು, ಹಾಲಿನ ಡೇರಿ, ಗ್ರಾಮ ಪಂಚಾಯಿತಿ ಕೇಂದ್ರ, ಅಂಚೆ ಕಚೇರಿ, ಪಶು ಆಸ್ಪತ್ರೆಗಳಿವೆ. ಯೂನಿಯನ್​ ಬ್ಯಾಂಕ್​ ಇದೆ. ಚನ್ನಪ್ಪನಕೆರೆ, ಗೊಲ್ಲನಭಾವಿ, ಹಲಗೆ ಅವ್ವನಕಟ್ಟೆ, ಕದಲಕಟ್ಟೆ ಕೆರೆಗಳಿವೆ.

ಗ್ರಾಮದ ಬಿ.ಟಿ. ರಾಜೇಂದ್ರ ಎಂಬ ಪರಿಸರ ಪ್ರೇಮಿಯೊಬ್ಬರು ಬಸವೇಶ್ವರ ದೇವಾಲಯ ಆವರಣ ಮತ್ತು ಜಲಸಿದ್ದೇಶ್ವರ ಬೆಟ್ಟದ ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಟ್ಟು ಪರಿಸರಕ್ಕೆ ಪೂರಕ ಗ್ರಾಮವನ್ನಾಗಿ ಮಾಡಿದ್ದಾರೆ.

ಜಲ ಸಿದ್ದೇಶ್ವರ

ಗ್ರಾಮದ ಪೂರ್ವದಿಕ್ಕಿನ ಬೆಟ್ಟದಲ್ಲಿ ಇತಿಹಾಸ ಪ್ರಸಿದ್ಧ ಜಲಸಿದ್ದೇಶ್ವರ ದೇವಾಲಯವಿದ್ದು, ಕಲ್ಲಿನ ಗುಹೆಯೊಳಗೆ ಲಿಂಗು ರೂಪದಲ್ಲಿದೆ. ಪ್ರತಿ ಸೋಮವಾರ ಮತ್ತು ಹಬ್ಬ ಹರಿದಿನಗಳಲ್ಲಿ ಪೂಜೆ ನಡೆಯುತ್ತದೆ. ಮೇಲ್ಭಾಗ ನಾಗರ ಸೆಡೆ ಇದ್ದು, ಮಳೆಗಾಲ, ಬೇಸಿಗೆ ಕಾಲದಲ್ಲೂ ನಾಗರ ಸೆಡೆಯಿಂದ ಲಿಂಗು ಮೇಲೆ ನೀರು ಬೀಳುತ್ತಿರುವುದು ಮತ್ತೊಂದು ವಿಶೇಷ. ಇಲ್ಲಿನ ದೇವರನ್ನು ಸುತ್ತಲೂ ಜೇನುಹುಳು ಕಾವಲು ಕಾಯುತ್ತಿರುತ್ತವೆ ಎಂಬ ಪ್ರತಿತಿ ಇದೆ. ಅದರಂತೆ ಬೆಟ್ಟದಲ್ಲಿ ಜೇನುಗೂಡುಗಳು ಸಾಕಷ್ಟಿವೆ. ಪ್ರತಿ ವರ್ಷ ಗ್ರಾಮಸ್ಥರು ವಿಜೃಂಭಣೆಯಿಂದ ಹಬ್ಬ ಆಚರಿಸಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸುತ್ತಾರೆ.

ಗ್ರಾಮದ ಹೆಸರಿನ ಇತಿಹಾಸ

ಬಿಳಗುಂಬ ಗ್ರಾಮದಲ್ಲಿ ಈ ಹಿಂದೆ ಇದ್ದ ಕುಂಬಾರ ಕುಟುಂಬಗಳು ತಯಾರು ಮಾಡಿದ ಮಡಕೆಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಕಾಲಾಂತರದಲ್ಲಿ ಮಡಕೆ ತಯಾರು ಮಾಡುತ್ತಿದ್ದ ಕುಟುಂಬಗಳು ವಲಸೆ ಹೋದ ಕಾರಣ ಮಡಕೆ ತಯಾರಿ ಕಣ್ಮರೆಯಾಯಿತು. ಬಿಳ ಎಂದರೆ ಉತ್ತಮ ಗುಂಬ ಎಂದರೆ ಮಡಕೆ ಎಂಬ ಅರ್ಥದಲ್ಲಿ ಬಿಳಗುಂಬ ಎಂದು ಹೆಸರಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು. ಇನ್ನೂ ಕೆಲವರು ಬಿಲ್ಲವ ಎಂಬ ಪಾಳೇಗಾರ ಈ ಪ್ರದೇಶವನ್ನು ಆಳುತ್ತಿದ್ದರಿಂದ ಬಿಳಗುಂಬ ಎಂದು ಹೆಸರಾಗಿದೆ ಎನ್ನುತ್ತಾರೆ.

ಮೂರು ದಿನ ಹಬ್ಬ

ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ನಂತರ ಗ್ರಾಮ ದೇವತೆಗಳ ಹಬ್ಬ ಆಚರಿಸಲಾಗುತ್ತದೆ. ಜಲಸಿದ್ದೇಶ್ವರ ಪರ, ಮಾರಮ್ಮ ದೇವರ ಅಗ್ನಿಕೊಂಡ, ಗ್ರಾಮ ದೇವತೆಗಳ ಉತ್ಸಾವಾದಿಗಳು ಮೂರು ದಿನ ವೈಭವವಾಗಿ ನಡೆಯುತ್ತವೆ.

ನೀರಿನ ಬರ ನೀಗಿಸಿದ ಕೆರೆಗಳು

ಗ್ರಾಮದಲ್ಲಿ ರೈತಾಪಿ ಕುಟುಂಬಗಳೇ ಹೆಚ್ಚು. ಅಲ್ಪ ಸ್ವಲ್ಪ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿರುವ ರೈತರು ಬೋರ್​ವೆಲ್​ ಕೊರೆಸಿಕೊಂಡು ತೆಂಗು, ಜಾನುವಾರು ಮೇವು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿನ ಚನ್ನಪ್ಪನ ಕೆರೆ, ಹಲಗೆವ್ವನ ಕಟ್ಟೆ, ಕರಲಕಟ್ಟೆಗಳು ಗೊಲ್ಲನಬಾವಿಗಳು ರೈತರಿಗೆ ಪೂರಕವಾಗಿ ಅಂತರ್ಜಲಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ. ಗ್ರಾಮದ ಕೆರೆಗಳು ನೀರಿನ ಭವಣೆ ತಪ್ಪಿಸಿವೆ.

ಗ್ರಾಮ ಇತಿಹಾಸ ಕಾಲದಿಂದಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಬೆಳೆದು ಬಂದಿದೆ. ಜೇನುಕಲ್ಲು ಸಿದ್ದೇಶ್ವರನಡಿಯಲ್ಲಿ ಗ್ರಾಮದ ಜನರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಾ ಬಂದಿದ್ದೇವೆ. ಇಂತಹ ಗ್ರಾಮದಲ್ಲಿ ಜನ್ಮ ತಾಳಿಸುವುದೇ ನಮ್ಮ ಸೌಭಾಗ್ಯ. > ದಿನೇಶ್​ ಬಿಳಗುಂಬ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್​, ರಾಮನಗರ ತಾಲೂಕು