ಪ್ರತಿ ಟನ್ ಕಬ್ಬಿಗೆ ರೂ.೪೨೭೦ ದರ
| ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಘೋಷಣೆ | ಸುದ್ದಿಗೋಷ್ಠಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಪೂರೈಸುವ ಪ್ರತಿ ಟನ್‌ಗೆ ರೂ. ೪೨೭೦ ನೀಡಲಾಗುವುದು ಎಂದು ಕಾರ್ಖಾನೆಯ ಮಾರ್ಗದರ್ಶಕರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಘೋಷಿಸಿದ್ದಾರೆ.
ನಿಪ್ಪಾಣಿ ನಗರದ ಹಾಲಸಿದ್ಧನಾಥ ಕಾರ್ಖಾನೆ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರೈತರ ಪರಿಶ್ರಮಕ್ಕೆ ನ್ಯಾಯಯುತ ಪ್ರತಿಫಲ ದೊರೆಯಬೇಕು ಎಂಬ ಉದ್ಧೇಶದಿಂದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ರೂ.೩೭೭೦ ಮೊದಲ ಕಂತಾಗಿ, ಹಂಗಾಮಿನ ಮುಕ್ತಾಯದ ನಂತರ ಸಕ್ಕರೆ ಇಳುವರಿ ಶೇ. ೧೧.೫೦ ಅಥವಾ ಅದಕ್ಕಿಂತ ಹೆಚ್ಚಾದಲ್ಲಿ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ ೧೦೦ ರೂ.ಅಲ್ಲದೆ, ಪ್ರಸಕ್ತ ಹಂಗಾಮಿನಲ್ಲಿ ಉತ್ಪಾದನೆಯಾಗುವ ಸಕ್ಕರೆಯ ಸರಾಸರಿ ಮಾರಾಟ ದರ ಪ್ರತಿ ಕೆ.ಜಿ.ಗೆ ೫೦ ರೂ. ಇದ್ದಲ್ಲಿ ಪ್ರತಿ ಟನ್‌ಗೆ ೨೦೦ರೂ. ೫೫ ರೂ. ಇದ್ದಲ್ಲಿ ೪೦೦ ರೂ. ಹಾಗೂ ೬೦ ರೂ. ಇದ್ದಲ್ಲಿ ೬೦೦ ರೂ ಹೆಚ್ಚುವರಿ ಮೊತ್ತವನ್ನು ಮುಂದಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವ ಮೊದಲು ಪಾವತಿಸಲಾಗುವುದು ಎಂದು ತಿಳಿಸಿದರು.
ಕಾರ್ಖಾನೆಯು ರೈತರ ವಿಶ್ವಾಸ, ಸಹಕಾರ ಮತ್ತು ಬೆಂಬಲದೊಅದಿಗೆ ನಿರಂತರವಾಗಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ರೈತರು ಮತ್ತು ಕಾರ್ಖಾನೆಯ ನಡುವಿನ ಸಂಬಂಧ ಕೇವಲ ವ್ಯವಹಾರಕ್ಕೆ ಸೀಮಿತವಾಗಿರದೆ ಪರಸ್ಪರ ನಂಬಿಕೆ, ಸಹಕಾರ ಹಾಗೂ ಅಭಿವೃದ್ಧಿಯ ಅವಿಭಾಜ್ಯ ಸಂಬಂಧವಾಗಿದೆ. ರೈತರ ಸಹಕಾರವೇ ಕಾರ್ಖಾನೆಯ ಯಶಸ್ಸಿನ ಪ್ರಮುಖ ಶಕ್ತಿಯಾಗಿದೆ ಎಂದು ಹೇಳಿದರು.
ಮಾಜಿ ಉಪ ನಗರಾಧ್ಯಕ್ಷ ಸುನೀಲ ಪಾಟೀಲ, ನಿರ್ದೇಶಕ ಜಯವಂತ ಭಾಟಲೆ, ರಾಜು ಗುಂದೇಶಾ, ಸುಹಾಸ ಗುಗೆ, ರಾವಸಾಹೇಬ ಫರಾಳೆ, ಡಾ.ಸುದರ್ಶನ ಮುರಬಟ್ಟೆ, ಬಾಳಾಸಾಹೇಬ ಕದಂ ಇತರರಿದ್ದರು.