ಬೆಳಗಾವಿ:ಸಕ್ಕರೆ ಕಾರ್ಖಾನೆಗಳ ಮಾಲೀಕರು ಮೊದಲ ಕಂತಿನಲ್ಲಿ ಟನ್ ಕಬ್ಬಿಗೆ 3,600 ರೂ. ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳ ಆಧಾರದ ಮೇಲೆ ಎರಡನೇ ಕಂತಿನ ಹಣ ನೀಡುವ ಷರತ್ತುಬದ್ಧ ಒಪ್ಪಂದಕ್ಕೆ ಸಕ್ಕರೆ ಕಾರ್ಖಾನೆಗಳು, ಮಾಲೀಕರು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ, ಜೈಲ್ ಭರೋ ಚಳುವಳಿ ತಾತ್ಕಾಲಿಕ ಸ್ಥಗೀತಗೊಳಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘೋಷಿಸಿದೆ.
ನಗರದ ಹಳೆ ಪೊಲೀಸ್ ಕ್ವಾಟರ್ಸ್ ಆವರಣದಲ್ಲಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗುರುವಾರ ಪೊಲೀಸರು ಬಂಧಿಸಿ ಈಡಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ, ಚುಕ್ಕಿ ನಂಜುಂಡಸ್ವಾಮಿ ಅವರೊಂದಿಗೆ ಸರ್ಕಾರದ ಪರವಾಗಿ ಮಾಜಿ ಸಚಿವ ಶಶಿಕಾಂತ ನಾಯಕ,ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಚರ್ಚಿಸಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪ್ರಭಾರ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಮಾತುಕತೆಯಲ್ಲಿ ಮೊದಲ ಕಂತಿನಲ್ಲಿ ಟನ್ ಕಬ್ಬಿಗೆ 3,600 ರೂ. ಹಾಗೂ ಎರಡನೇ ಕಂತಿನ ಹಣ ಪಾವತಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲು ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಒಪ್ಪಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ಟನ್ ಕಬ್ಬಿಗೆ 5,500 ರೂ. ಹಾಗೂ ಎಂಎಸ್‌ಪಿ 50 ರೂ. ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ಎರಡು ತಿಂಗಳ ಹೋರಾಟದ ಫಲವಾಗಿ ಕೇಂದ್ರ ಆಹಾರ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಎಂಎಸ್‌ಪಿ ಹೆಚ್ಚಳಕ್ಕೆ ಸಮಿತಿ ರಚನೆ ಮಾಡಿ ನ.26ಕ್ಕೆ ದರ ಘೋಷಣೆ ಮಾಡುವುದಾಗಿ ಮಾತುಕೊಟ್ಟಿದ್ದಾರೆ. ಇದೀಗ ಮೊದಲ ಕಂತಿನಲ್ಲಿ ಟನ್ ಕಬ್ಬಿಗೆ 3,600 ರೂ. ನೀಡಲು ಸಕ್ಕರೆ ಕಾರ್ಖಾನೆಗಳು ಮಾಲೀಕರು ಒಪ್ಪಿದ್ದರಿಂದ ನಮಗೆ ಮೊದಲ ಹಂತದ ಯಶಸ್ಸು ದೊರೆತಿದೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಳೆದ ಸಾಲಿನಲ್ಲಿ ಟನ್ ಕಬ್ಬಿಗೆ 3,250 ರೂ. ನೀಡಿದ್ದರು. ಇದೀಗ ನಮ್ಮ ಹೋರಾಟ ಫಲವಾಗಿ ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ 350 ಹೆಚ್ಚುವರಿ ದರ ದೊರಕಿದೆ.ಸಕ್ಕರೆಯ ಎಂಎಸ್‌ಪಿ ಹೆಚ್ಚಳವಾದ ಬಳಿಕ ಇದೇ ಹಂಗಾಮಿನಲ್ಲಿ ಟನ್ ಕಬ್ಬಿಗೆ ಒಟ್ಟು 4,350 ರೂ.ದರ ದೊರೆಯುವುದು ನಿಶ್ಚಿತ. ಇದೇ ಮೊದಲ ಬಾರಿಗೆ ಸಕ್ಕರೆ ಮಾರಾಟದ ಲಾಭಾಂಶದಲ್ಲಿ ರೈತರಿಗೆ ಶೇ.75ರಷ್ಟು ಪಾಲು ದೊರೆಯುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಒಪ್ಪಂದವಾಗಿದೆ ಎಂದು ಹೇಳಿದರು.
...........
ಬಾಕ್ಸ್
ಎಸ್‌ಎಪಿ 1000 ರೂ.ಘೋಷಿಸಲಿ
ರಾಜ್ಯ ಸರ್ಕಾರದಿಂದ ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ಘೋಷಣೆಯಾಗುವವರೆಗೂ ರೈತರ ಹೋರಾಟ ಸಂಪೂರ್ಣವಾಗಿ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತಿನಂತೆ ನಡೆದುಕೊಳ್ಳಬೇಕು. ಟನ್ ಕಬ್ಬಿಗೆ 1000 ರೂ. ಎಸ್‌ಎಪಿ ಘೋಷಿಸುವ ಮೂಲಕ ರೈತರ ಹಿತ ಕಾಯಬೇಕು. ಚಳಿಗಾಲ ಅಧಿವೇಶನದ ಒಳಗಾಗಿ ಸರ್ಕಾರ ಎಸ್‌ಎಪಿ ಕುರಿತು ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಸಿಎಂ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ಪ್ರದರ್ಶನ ಅಭಿಯಾನ ಆರಂಭಿಸಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.
............
ಕೋಟ್ಸ್
ತೀವ್ರ ಬರದಿಂದಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹೋರಾಟ ನಡೆಸುವುದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಮಾಲೀಕರು ಟನ್ ಕಬ್ಬಿಗೆ 3,600 ರೂ. ನೀಡುವುದು ಹಾಗೂ ಎರಡನೇ ಕಂತಿನ ಹಣ ನೀಡುವ ಕುರಿತು ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆ ಹೋರಾಟ ಕೈಬಿಟ್ಟಿರುವುದು ಒಳ್ಳೆಯ ಬೆಳವಣಿಗೆ.
- ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ
..........