ಜಿಲ್ಲೆಯಲ್ಲಿ ರಿಂಗ್ ರೋಡ್ಗೆ ಆರಂಭಿಕ ವಿಘ್ನ!
ವರ್ತುಲ ರಸ್ತೆಗೆ ವಿರೋಧ | ರೈತರಿಗೆ ಭೂಮಿ ಕಳೆದುಕೊಳ್ಳುವ ಭೀತಿ
ಆನಂದ ಭಮ್ಮನ್ನವರ ಚಿಕ್ಕೋಡಿ
ನಗರೀಕರಣದಿಂದ ತಾಲೂಕು ಕೇಂದ್ರಗಳಲ್ಲೂ ಸಂಚಾರ ಸಿಕ್ಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ಪಟ್ಟಣಗಳಲ್ಲಿ ಜಿಐಎಸ್ ಆಧಾರಿತ ರೋಡ್ ನೆಟ್ವರ್ಕಿಂಗ್ ಗ್ರೀಡ್ ಪ್ಲ್ಯಾನ್ ಅಡಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆಯ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಿಸಲು ಮುಂದಾಗಿದೆ. ಆದರೆ, ಜಿಲ್ಲೆಯಲ್ಲಿ ವರ್ತುಲ ರಸ್ತೆಗೆ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಪ್ರಸ್ತಾಪಿತ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ.
ಚನ್ನಮ್ಮನ ಕಿತ್ತೂರ ತಾಲೂಕಿನ ಎಂ.ಕೆ.ಹುಬ್ಬಳ್ಳಿ, ಸವದತ್ತಿಯ ಮುನವಳ್ಳಿ, ಯರಗಟ್ಟಿ, ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಸದಲಗಾ ಮತ್ತು ಕಬ್ಬೂರ, ಗೋಕಾಕಿನ ಅಂಕಲಗಿ, ಕೊಣ್ಣೂರ, ಘಟಪ್ರಭಾ ಹಾಗೂ ಕಾಗವಾಡ, ಶೇಡಬಾಳ, ಉಗಾರ-ಖುರ್ದು, ಮೂಡಲಗಿಯ ಅರಬಾವಿ, ಕಲ್ಲೋಳಿ ಮತ್ತು ನಾಗನೂರ, ನಿಪ್ಪಾಣಿ ತಾಲೂಕಿನ ಬೋರಗಾಂವ, ರಾಯಬಾಗ ತಾಲೂಕಿನ ಚಿಂಚಲಿ, ಹಾರೂಗೇರಿ, ಕಂಕಣವಾಡಿ, ಮುಗಳಖೋಡ, ರಾಯಬಾಗ ಪಟ್ಟಣ ಸೇರಿದಂತೆ ೨೧ ಸ್ಥಳಗಳಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ತಾತ್ಕಾಲಿಕ ಅನುಮೋದನೆಗೊಂಡಿರುವ ಯೋಜನೆಯ ನಿಯೋಜಿತ ರಸ್ತೆಯು ೧೦೦ ಅಡಿ ಅಗಲ ಹಾಗೂ ಎರಡೂ ಬದಿಯಲ್ಲೂ ಎರಡು ಕಿಮೀ ಪ್ರಭಾ (ಇಂಪ್ಯಾಕ್ಟ್ ಜೋನ್)ವಲಯ ಒಳಗೊಳ್ಳಲಿದೆ. ಇಂಪ್ಯಾಕ್ಟ್ ಜೋನ್ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವಂತಿಲ್ಲ. ಈ ಯೋಜನೆಗೆ ಪ್ರತಿ ರಿಂಗ್ ರೋಡ್ ನಿರ್ಮಾಣಕ್ಕೆ ೫೦೦-೬೦೦ ಎಕರೆ ಭೂಮಿ ಸ್ವಾಧೀನ ಕಾರ್ಯ ನಡೆಯಲಿದ್ದು, ಇದು ಜಿಲ್ಲೆಯ ರೈತರಿಗೆ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕ ಹೆಚ್ಚಿಸಿದೆ. ಯೋಜನೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ನ.೨ರಂದು ಕೊನೆಯ ದಿನವಾಗಿದೆ.
ಭೂಸ್ವಾಧೀನಕ್ಕೆ ವಿರೋಧ:
ಜಿಲ್ಲೆಯಲ್ಲಿ ೨೧ ಸ್ಥಳಗಳಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದರೂ ಭೂಮಿ ಕಳೆದುಕೊಳ್ಳುವವರಿಗೆ ಮಾಹಿತಿಯೇ ಇಲ್ಲ ಎಂಬುವುದು ವಿಪರ್ಯಾಸ. ರಿಂಗ್ ರೋಡ್ ನಿರ್ಮಾಣಕ್ಕೆ ೨೧ ಸ್ಥಳಗಳ ಪೈಕಿ ಚಿಕ್ಕೋಡಿ ತಾಲೂಕಿನ ಮಲಿಕವಾಡ ಮತ್ತು ಯಕ್ಸಂಬಾ ಪಟ್ಟಣದ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
--ಕೋಟ್--
ಇದು ತಾತ್ಕಾಲಿಕ ಅನುಮೋದಿತ ಯೋಜನೆಯಾಗಿದೆ. ಆಕ್ಷೇಪಣೆಗೆ ಸಮಯಾಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಇಲಾಖೆಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಲಿಕವಾಡ ಮತ್ತು ಯಕ್ಸಂಬಾ ಹೊರತುಪಡಿಸಿ ಬೇರೆಲ್ಲಿಯೂ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ.
| ಯಶೋದಾ ಉಳ್ಳಿಕಾಶಿ
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕಿ, ನಿಪ್ಪಾಣಿ
ಕೋಟ್
ಗ್ರಾಮೀಣ ಭಾಗದಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಇದರಿಂದ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬರುತ್ತಾರೆ. ಈ ಯೋಜನೆ ವಿರೋಧಿಸಿ ಮಲಿಕವಾಡ ಗ್ರಾಮದಿಂದ ೩೦೦ಕ್ಕೂ ಅಧಿಕ ರೈತರು ಆಕ್ಷೇಪಣೆ ಸಲ್ಲಿಸಿದ್ದೆವೆ. ಯೋಜನೆಗೆ ವಿರೋಧವಿದೆ.
| ಮಿಥುನ ದೇಶಪಾಂಡೆ
ಮಲಿಕವಾಡ ಗ್ರಾಮಸ್ಥ.
ಚ