ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದ ಮಾರುತಿ ಮರಡಿ ಅವರ ಕುರಿ ಶೆಡ್ಡು. 
ಬೆಳಗಾವಿ

ಮಾರುತಿ ಕೈ ಹಿಡಿದ ನಾರಿ ಸುವರ್ಣ

ಎಂಬಿಎ ಪದವಿ ಪಡೆದು ಕುರಿ ಸಾಕಿ ಯಶಸ್ಸು

ಕುರಿ ಸಾಕಣೆದಾರರಿಗೆ ವರದಾನವಾದ ನಾರಿ ಸುವರ್ಣ
| ಮಹಾರಾಷ್ಟ್ರಸ ತಳಿ ರಾಜ್ಯಕ್ಕೆ ಪರಿಚಯಿಸಿದ ಮಾರುತಿ ಮರಡಿ | ವಾರ್ಷಿಕ ಲಕ್ಷಾಂತರ ರೂ. ಆದಾಯ
ಆನಂದ ಭಮ್ಮನ್ನವರ ಚಿಕ್ಕೋಡಿ
ಯುವಕರು ಪದವಿ ಶಿಕ್ಷಣ ಪಡೆದು ನೌಕರಿ ಸಿಗದೆ ಜೀವನದ ಬಗ್ಗೆ ಜಿಗುಪ್ಸೆ ಮಾತುಗಳನ್ನಾಡುವ ಈ ಕಾಲದಲ್ಲಿ ಇಲ್ಲೊಬ್ಬ ಎಂಬಿಎ ಪದವಿದರ ನೌಕರಿಗಾಗಿ ಅಲೆಯದೆ ವಿವಿಧ ತಳಿಯ ಕುರಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ವಾರ್ಷಿಕ ೩೦ ಲಕ್ಷ ರೂ. ಆದಾಯ ಪಡೆಯುವ ಮೂಲಕ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದ ಮಾರುತಿ ಮರಡಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಕುರಿ ಸಾಕಣೆ ಇಂದು ಕೇವಲ ಕುಲ ಕಸುಬಾಗಿ, ಉಪ ಕಸುಬಾಗಿ ಉಳಿದಿಲ್ಲ. ಬದಲಾಗಿ ಹೆಚ್ಚಿನ ಆದಾಯ ನೀಡುವ ಉದ್ಯಮವಾಗಿ ಪರಿವರ್ತನೆಯಾಗಿದೆ. ಇದಕ್ಕೆ ಉದಾಹರಣೆ ಮಾರುತಿ ಮರಡಿ ೨೦೧೮ರಲ್ಲಿ ೧೧ ಕುರಿಗಳಿಂದ ಸಾಕಣೆ ಪ್ರಾರಂಭಿಸಿ, ಇಂದು ತನ್ನ ಶೆಡ್‌ದಲ್ಲಿ ೨೫೦ ವಿವಿಧ ತಳಿಯ ಕುರಿಗಳನ್ನು ಸಾಕುವ ಮೂಲಕ ಕುರಿ ಸಾಕಣೆಯಲ್ಲಿ ಯಶ ಕಂಡಿದ್ದಾರೆ.
ಹೊಸ ಪ್ರಯೋಗ:
ಮಾರುತಿ ಮರಡಿ ಮೊದಲು ಸಾಂಪ್ರದಾಯಿಕ ಸಾಮಾನ್ಯ ಕುರಿ ಸಾಕುವುದರಿಂದ ಆರಂಭಿಸಿ, ನಂತರ ಪಂಜಾಬ ಬಿಟಲ್, ಮಹಾರಾಷ್ಟ್ರದ ನಾರಿ ಸುವರ್ಣ, ಬನ್ನೂರು, ಡಾರ್ಪರ್ ಎಫ್೧ ಸೇರಿ ವಿವಿಧ  ತಳಿಗಳನ್ನು ಸಾಕುವ ಮೂಲಕ ನೋಡುಗರ ಹುಬ್ಬೆರಿಸುವಂತೆ ಆದಾಯ ಪಡೆಯುತ್ತಿದ್ದಾರೆ.
ದುಪ್ಪಟ್ಟಾದ ಆದಾಯ:
ಮಹಾರಾಷ್ಟ್ರದ ನಿಂಬಕರ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್(ನಾರಿ) ೨೦೧೪ರಲ್ಲಿ ಅಭಿವೃದ್ಧಿ ಪಡಿಸಿರುವ ನಾರಿ ಸುವರ್ಣ ತಳಿಯನ್ನು ಮಾರುತಿ ಮರಡಿ ರಾಜ್ಯದಲ್ಲಿ ಪರಿಚಯಿಸುವ ಮೂಲಕ ನಾರಿ ಸುವರ್ಣ ತಳಿ ಬಗ್ಗೆ ಜನರಲ್ಲಿ ಒಲವು ಮೂಡಿಸಿದ್ದಾರೆ. ಸಾಮಾನ್ಯ ಕುರಿಗಳು ವರ್ಷದಲ್ಲಿ ೧ ಬಾರಿ ಇಳುವರಿ ನೀಡುತ್ತವೆ. ಆದರೆ, ನಾರಿ ಸುವರ್ಣ ತಳಿಯ ಮರಿಗಳು ಒಮ್ಮೆ ೩-೪ ಮರಿಗಳನ್ನು ನೀಡುತ್ತವೆ. ಇದರಿಂದ ಆದಾಯವು ಬೇರೆ ತಳಿಗಳಿಗಿಂತ ದುಪ್ಪಟ್ಟಾಗಿದೆ. ಅಲ್ಲದೆ ಇವು ಉತ್ತಮ ರೋಗನಿರೋಧಕ ಶಕ್ತಿ ಹೊಂದಿದ್ದು, ಬೆಳವಣಿಗೆ ವೇಗವಾಗಿದೆ. ಮತ್ತು ನೋಡಲು ಕೂಡ ಆಕರ್ಷವಾಗಿವೆ. ಈ ಕಾರಣದಿಂದ ಕುರಿ ಸಾಕಣೆದಾರರ ಒಲವು ಇಂದು ನಾರಿ ಸುವರ್ಣ ತಳಿಯ ಕಡೆಗೆ ಹೆಚ್ಚಾಗಿದೆ.
ಸಾಕಣೆ ಜತೆಗೆ ತರಬೇತಿ:
ಮಾರುತಿ ಮರಡಿ ತನ್ನ ಐದು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಅಳಡಿಸಿಕೊಂಡು ಕಬ್ಬು, ಮೆಕ್ಕೆ ಜೋಳ ಬೆಳೆಯುತ್ತಿದ್ದು, ಇದರ ಜತೆಗೆ ೮೦*೩೭ ಅಡಿಯ ಶೆಡ್ ನಿರ್ಮಿಸಿಕೊಂಡು ೨೫೦ ಕುರಿ ಸಾಕುತ್ತಿದ್ದಾರೆ. ಜತೆಗೆ ಮೌರ್ಯ ಪಶುವೇದ ಅಕಾಡೆಮಿ ಪ್ರಾರಂಭಿಸಿ ಪ್ರಸ್ತುತ ೫೦೦ ಫಾರ್ಮ್ಗಳಿಗೆ ಕುರಿ, ಮೇಕೆ, ಕೋಳಿ ಸಾಕಣೆಯ ತರÀಬೇತಿ ನೀಡುತ್ತಿದ್ದಾರೆ. ಇವರ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ನೀಡಿ ಗೌರವಿಸಿವೆ.
----------
ಬಾಕ್ಸ್
ಪಶು ಇಲಾಖೆಯಿಂದ ಖರೀದಿ:
ರಾಜ್ಯದಲ್ಲಿ ನಾರಿ ಸುವರ್ಣ ತಳಿ ಬಲವರ್ಧನೆಗೆ ಪಶು ಇಲಾಖೆಯು ಮಾರುತಿ ಮರಡಿ ಅವರು ಸಾಕಿರುವ ೫೦೦ ನಾರಿ ಸುವರ್ಣ(ಟಗರು) ಮರಿಗಳನ್ನು ತಲಾ ೨೫ ಸಾವಿರ.ರೂ ನೀಡಿ ಖರೀದಿಸಿದ್ದು, ಈ ಮೂಲಕ ರಾಜ್ಯದಲ್ಲಿ ನಾರಿ ಸುವರ್ಣ ತಳಿ ಪರಿಚಿಯಿಸಿದ ಕೀರ್ತಿ ಮಾರುತಿ ಮರಡಿಗೆ ಸಲ್ಲುತ್ತದೆ.  
--------