ಮ್ಯಾರಥಾನ್‌ದಲ್ಲಿ ಪಾಲ್ಗೊಂಡಿದ್ದ ಓಟಗಾರರೊಂದಿಗೆ ಅಧಿಕಾರಿಗಳು. 
ಬೆಳಗಾವಿ

ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್

ಸಶಕ್ತ ಕರ್ನಾಟಕ ಕಾರ್ಯಕ್ರಮದಡಿ ಆಯೋಜನೆ

ಬೆಳಗಾವಿ: ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ಬೆಳಗಾವಿಯೂ ಸೇರಿದಂತೆ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಭಾಗವಾಗಿ ಭಾನುವಾರ ಸುವರ್ಣ ವಿಧಾನಸೌಧದ ಆವರಣದಲ್ಲಿ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಲಾಯಿತು.

ಮ್ಯಾರಾಥಾನ್ ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಆರೋಗ್ಯ ಮತ್ತು ಸೌಹಾರ್ದತೆ ಮೂಲಕ ಸಶಕ್ತ ಕರ್ನಾಟಕ ರೂಪಿಸುವುದು ನಮ್ಮ ಉದ್ದೇಶವಾಗಿದೆ.ಯಾವುದೇ ಜಾತಿ-ಧರ್ಮ, ಕುಲ, ಭೇದ-ಭಾವವಿಲ್ಲದೇ ಎಲ್ಲರೂ ಒಂದಾಗಿ ಓಟದಲ್ಲಿ ಭಾಗಿಯಾಗುವ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ಸಾರಿರುತ್ತಾರೆ. ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನರಾಜ್ ಸಿಂಗ್ ಮಾತನಾಡಿ, ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ“ಸಶಕ್ತ ಕರ್ನಾಟಕ ಕಾರ್ಯಕ್ರಮದಡಿ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ. ಮುಂದಿನ ಹಂತದಲ್ಲಿ ವಿಶ್ವಪ್ರಸಿದ್ಧ ಹಂಪಿ, ಚಿತ್ರದುರ್ಗದಲ್ಲಿ ಕೋಟೆ ರನ್ ಹಾಗೂ ಗೋಕರ್ಣದಲ್ಲಿ ಕೋಸ್ಟಲ್ ರನ್ ನಡೆಯಲಿವೆ. ಇಂದಿನ ಓಟದಲ್ಲಿ ಮಕ್ಕಳ, ಯುವಕರು ಮಾತ್ರವಲ್ಲದೇ ಹಿರಿಯರು ಕೂಡ ಭಾಗವಹಿಸುವ ಮೂಲಕ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ ವತಿಯಿಂದ ಜೆ.ಜೆ.ಅಕ್ಟಿವ್ ಬೆಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಮ್ಯಾರಾಥಾನ್ ಆಯೋಜಿಸಲಾಗಿತ್ತು.

ಇದರಲ್ಲಿ 5 ಕಿ.ಮೀ, 10 ಕಿ.ಮೀ ಮತ್ತು 21 ಕಿ.ಮೀ ಹಾಫ್ ಮ್ಯಾರಾಥಾನ್ ಬೆಳಗಾವಿಯ ಸುವರ್ಣಸೌಧದಿಂದ ಪ್ರಾರಂಭಗೊಂಡು ನಗರದ ಕೋಟೆ ಕೆರೆ (Belagavi Fort) ಮಾರ್ಗವಾಗಿ ಮತ್ತೆ ಸುವರ್ಣಸೌಧದ ಮುಂಭಾಗದಲ್ಲಿ ಮುಕ್ತಾಯಗೊಂಡಿತು.