ಬೆಳಗಾವಿ ನಗರದ ಮಹಾಂತ ಭವನದಲ್ಲಿ ಈಚೆಗೆ ಬಸವರಾಜ ಕಟ್ಟೀಮನಿ ಜನ್ಮ ದಿನೋತ್ಸವ ಕಾರ್ಯಕ್ರಮ ಜರುಗಿತು. ಯಲ್ಲಪ್ಪ ಹಿಮ್ಮಡಿ, ಪ್ರೊ.ಗುರುಪಾದ ಮರಿಗುದ್ದಿ , ಪ್ರೊ.ವಿಷ್ಣು ಎಂ. ಶಿಂದೆ ಇತರರಿದ್ದರು. 
ಬೆಳಗಾವಿ

ನಿರ್ಭಿಡೆ ವ್ಯಕ್ತಿತ್ವ, ಸಾಹಿತ್ಯದ ಸಾಕ್ಷಿ ಕಟ್ಟೀಮನಿ’

ಬಸವರಾಜ ಕಟ್ಟೀಮನಿ ಜನ್ಮ ದಿನೋತ್ಸವ

ಬೆಳಗಾವಿ: ‘ಸಾಹಿತಿ ಬಸವರಾಜ ಕಟ್ಟೀಮನಿ ತತ್ವಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ತಮ್ಮ ಸಾಹಿತ್ಯದ ಪ್ರತಿಭಟನಾ ಪ್ರವೃತ್ತಿಯಲ್ಲಿ ಎಂದೂ ಸಡಿಲಿಕೆ ಮಾಡಿಕೊಳ್ಳಲಿಲ್ಲ. ಇಷ್ಟೊಂದು ನೇರವಾಗಿ, ಪ್ರಖರವಾಗಿ ಅನ್ಯಾಯವನ್ನು ಖಂಡಿಸುವ ಸಾಹಿತಿ ಅ‍ಪರೂಪ’ ಎಂದು ವಿಮರ್ಶಕ ಪ್ರೊ.ಗುರುಪಾದ ಮರಿಗುದ್ದಿ ಹೇಳಿದರು.

ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ, ಮಹಾಂತ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿಶೀಲ ಸಾಹಿತಿ ಬಸವರಾಜ ಕಟ್ಟೀಮನಿ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಉ‍‍ಪನ್ಯಾಸ ನೀಡಿದರು.

‘ತನಗೊಂದು ಖ್ಯಾತಿ ಬರಬೇಕು, ಉಲ್ಲಾಸ ತರಬೇಕು ಎಂಬ ಆಶಯಕ್ಕೆ ಪೆನ್ನು ಹಿಡಿದವರಲ್ಲ ಕಟ್ಟೀಮನಿ. ಅವರು ಕಂಡ ಸಮಾಜದ ಘಾತಕ ಪ್ರವೃತ್ತಿಯನ್ನು ಖಂಡಿಸಲು ನಿಂತವರು. ತಾರತಮ್ಯವನ್ನು, ಅಂಧಾನುಕರಣೆಯನ್ನು, ದೊಡ್ಡವರು– ಸಣ್ಣವರ ಮೇಲೆ ಮಾಡುವ ಶೋಷಣೆಗಳನ್ನು ಅವರು ಪ್ರತಿ ಕೃತಿಯಲ್ಲೂ ಖಂಡಿಸಿದ್ದಾರೆ. ಶೋಷಿತರು, ನೊಂದವರ ಧ್ವನಿಯಾಗಿ ನಿಲ್ಲುವುದು ಸಾಹಿತ್ಯದ ಮುಖ್ಯ ಉದ್ದೇಶವಾಗಬೇಕೆ ಹೊರತು; ವಿಲಾಸಕ್ಕಾಗಿ ಬರೆಯುದಿಲ್ಲ ಎಂಬುದು ಅವರ ದೃಢ ನಿಶ್ಚಯವಾಗಿತ್ತು. ಆ ಗುಣವನ್ನೇ ಅಕ್ಷರ ರೂಪಕ್ಕೆ ಇಳಿಸಿದರು’ ಎಂದು ವಿವರಿಸಿದರು.

‘ಜರತಾರಿ ಜಗದ್ಗುರು, ಜನಿವಾರ– ಶಿವದಾರ ಮುಂತಾದ ಕೃತಿಗಳನ್ನು ಓದಿದರೆ ಕಟ್ಟೀಮನಿ ಅವರೊಳಗಿನ ಮನುಷ್ಯ ಅರ್ಥವಾಗುತ್ತಾನೆ. ಈಗ ಯಾರಿಂದಲೂ ಅಂಥ ನಿರ್ಭಿಡೆ ಕೃತಿಯೊಂದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಿವರಾಮ ಕಾರಂತರಲ್ಲಿ ಇದ್ದಂಥ ನಿರ್ಭಿಡೆ ವ್ಯಕ್ತಿತ್ವ ಕಟ್ಟೀಮನಿ ಅವರಲ್ಲೂ ಇತ್ತು. ಸ್ವತಃ ಕುವೆಂಪು ಅವರ ಚಿತ್ತವನ್ನೂ ಸೆಳೆದ ಲೇಖಕ ಕಟ್ಟೀಮನಿ’ ಎಂದರು.

‘ಕಟ್ಟೀಮನಿ ಅವರು ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಎಂದಿಗೂ ವೃತ್ತಿ ಧರ್ಮದಲ್ಲಿ ರಾಜೀ ಮಾಡಿಕೊಳ್ಳಲಿಲ್ಲ. ಅವರಿಗೆ ಕೆಲಸ ಕೊಟ್ಟಿದ್ದ ಪತ್ರಿಕೆಯ ಮಾಲೀಕರ ಅಕ್ರಮವನ್ನು ಅವರದೇ ಪತ್ರಿಕೆಯಲ್ಲಿ ಬರೆದು ಅರಗಿಸಿಕೊಂಡದ್ದು ಕಟ್ಟೀಮನಿ ಅವರ ವ್ಯಕ್ತಿತ್ವಕ್ಕೆ ಕನ್ನಡಿ’ ಎಂದು ಮರಿಗುದ್ದಿ ನೆನೆದರು.

‘ತಮ್ಮ ಕಾಲದ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸಿದರು. ಶೋಷಣೆ, ಜಾತಿ ವ್ಯವಸ್ಥೆ ಹಾಗೂ ಮತೀಯವಾದದ ವಿರುದ್ಧ ತಮ್ಮ ಲೇಖನಿ ಝಳಪಿಸಿದರು. ಒಮ್ಮೆ ವಿಧಾನ ಪರಿಷತ್‌ ಸದಸ್ಯರಾಗಿದ್ದ ಅವರು; ರಾಜಕೀಯ ವ್ಯವಸ್ಥೆಯಲ್ಲಿನ ಅನ್ಯಾಯಗಳ ವಿರುದ್ಧವೂ ಬರೆದರು. ಅಂಥ ಒಬ್ಬ ಗಟ್ಟಿ ನಿಲುವಿನ ಲೇಖಕ ಮತ್ತೆ ಸಿಗಲಾರ’ ಎಂದೂ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ, ‘ಬಹಳಷ್ಟು ಸಾಹಿತಿಗಳಿಗೆ ತಾನು ಏಕೆ ಬರೆಯುತ್ತೇನೆ ಎಂಬುದೇ ಗೊತ್ತಿಲ್ಲ. ಏನು ಬರೆಯುತ್ತೇನೆ ಎಂಬುದೂ ಅರಿವಿಲ್ಲ. ಬರಹಗಾರ ಅನ್ನಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಗೀಚುವವರೂ ಇದ್ದಾರೆ. ಆದರೆ, ಬರವಣಿಗೆಗೆ ನಿಂತಮೇಲೆ ಸಾಮಾಜಿಕ ಹೊಣೆಗಾರಿಕೆ ಹೊರಲೇಬೇಕಾಗುತ್ತದೆ. ಅಂಥ ಹೊಣೆಗಾರಿಕೆಯನ್ನು ಜೀವನದುದ್ದಕ್ಕೂ ನಿಭಾಯಿಸಿದವರು ಬಸವರಾಜ ಕಟ್ಟೀಮನಿ’ ಎಂದರು.

‘ಪಂಚಾಬ್‌ನ ಕವಿ ಘಣಶಾಮ್‌ ಅಗರವಾಲ್‌ ಅವರು ಬರೆದ ಸಾಲುಗಳು ಹೀಗಿವೆ ‘ಬಾಂಬು ಕಂಡುಹಿಡಿದ ವಿಜ್ಞಾನಿಗೆ ಐದು ಛಡಿಏಟು ಕೊಡಿ, ಅದಕ್ಕೆ ಧರ್ಮದ ಬಣ್ಣದ ಬಳಿದ ಧರ್ಮಗುರುವಿಗೆ ಹತ್ತು ಛಡಿಏಟು ಕೊಡಿ, ಅದನ್ನು ರಾಜಕೀಯಕ್ಕೆ ಬಳಸಿಕೊಂಡವನಿಗೆ ಹದಿನೈದು ಛಡಿಏಟು ಕೊಡಿ. ಈತ ಕವಿ–ಕಲಾವಿದ; ಈತನಿದ್ದೂ ಬಾಂಬು ಸೃಷ್ಟಿಯಾಯಿತು ಈತನಿಗೆ ಇಪ್ಪತ್ತು ಛಡಿಏಟು ಕೊಡಿ’ ಎಂದು ಬರೆದ್ದಾನೆ. ಅಂದರೆ; ಬರಹಗಾರನ ಹೊಣೆ ಎಲ್ಲಕ್ಕಿಂತ ಹಿರಿದು ಎಂಬುದನ್ನು ಯುವ ಸಾಹಿತಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದೂ ಸಂವೇದನಾಶೀಲವಾಗಿ ವಿವರಿಸಿದರು.

ಪ್ರತಿಷ್ಠಾನದ ಸದಸ್ಯ ‍ಪ್ರೊ.ವಿಷ್ಣು ಎಂ. ಶಿಂದೆ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾಲೇಜು ಪ್ರಾಂಶುಪಾಲರಾದ ನಿರ್ಮಲಾ ಬಟ್ಟಲ, ಅಧ್ಯಾಪಕ ಅ.ಬ. ಇಟಗಿ ವೇದಿಕೆ ಮೇಲಿದ್ದರು. ಸದಸ್ಯರಾದ ಅಮಿದಾ ಬೇಗಂ ದೇಸಾಯಿ ಸ್ವಗತಿಸಿದರು. ಪ್ರೊ.ಕೆ.ಅರ್‌.ಸಿದ್ದಗಂಗಮ್ಮ ನಿರೂಪಿಸಿದರು. ವಿಠಲ ದಳವಾಯಿ ವಂದಿಸಿದರು.