ದಸರಾ ಸಂಭ್ರಮದಲ್ಲಿದ್ದವರಿಗೆ ಅಪಘಾತದ ಆಘಾತ
| ದೇವಿಯ ಆರಾಧನೆಯಲ್ಲಿದ್ದವರಿಗೆ ಹಿಂದಿನಿಂದ ಬಂದ ಜವರಾಯ | ಮೂವರ ದಾರುಣ ಸಾವು
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ದಸರಾ ಪ್ರಯುಕ್ತ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೆ ಕೊಂಡಯುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಟ್ರಕ್ ರೂಪದಲ್ಲಿ ಜವರಾಯ ಡಿಕ್ಕಿಯಾದ ಪರಿಣಾಮ ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಕ್ಕೇರಿ ತಾಲೂಕಿನ ನರಸಿಂಗಪುರ ಬಳಿ ಪುನಾ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದ್ದು, ದಸರಾ ಸಂಭ್ರಮದಲ್ಲಿದ್ದ ಕುಟುಂಬಗಳಿಗೆ ಶೋಕ ತಂದಿದೆ.
ಪ್ರಕಾಶ ವಾಸೇದಾರ (೨೮)ದಾನಪ್ಪಾ ಜಾಗನೂರೆ (೨೬)ಹಾಗೂ ಮಹೇಶ ಖಾನಾಪೂರೆ (೩೦) ಮೃತ ಯುವಕರು. ಬೆಳಗಾವಿಯಿಂದ ಹುಕ್ಕೇರಿ ತಾಲೂಕಿನ ಹಂಜ್ಜಾನಟ್ಟಿ ಗ್ರಾಮಕ್ಕೆ ದುರ್ಗಾದೇವಿಯ ಮೂರ್ತಿಯನ್ನು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕೊಂಡೊಯುತ್ತಿರುವಾಗ ಅವಘಡ ಸಂಭವಿಸಿದೆ.
ಮಂಜು ತಂದ ಆಪತ್ತು:
ಕಳೆದ ೮ ವರ್ಷದಿಂದ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡ ಬಂದಿದ್ದ ಗ್ರಾಮದ ಯುವಕರು . ಈ ಬಾರಿ ೯ನೇ ವರ್ಷದ ಸಂಭ್ರದಲ್ಲಿದ್ದರು. ದೇವಿಯ ಮೂರ್ತಿಯೊಂದಿಗೆ ಬೆಳಗಿನ ಸಮಯದಲ್ಲಿ ಗ್ರಾಮಕ್ಕೆ ತೆರಳುವ ತವಕದಲ್ಲಿದ್ದವರಿಗೆ ಬೆಳಗಿನ ಸಮಯದಲ್ಲಿ ಆವರಿಸಿದ್ದ ಮಂಜು ಲಾರಿ ಚಾಲಕನಿಗೆ ಟ್ರ್ಯಾಕ್ಟರ್ ಕಂಡು ಬಾರದೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕುಟುಂಬ ಆಧಾರವಾಗಿದ್ದ ಯುವಕರು:
ಅಪಘಾತದಲ್ಲಿ ಮೃತಪಟ್ಟ ಮೂವರು ಯುವಕರು ಕುಟುಂಬದ ಆಧಾರವಾಗಿದ್ದರು, ಇದರಲ್ಲಿ ದಾನಪ್ಪ ಜಾಗನೂರೆ ಹುಕ್ಕೇರಿ ಬೇಕರಿ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇನ್ನುಳಿದ ಪ್ರಕಾಶ ವಾಸೇದಾರ ಹಾಗೂ ಮಹೇಶ ಖಾನಾಪೂರೆ ಕೃಷಿ ಕೆಲಸ ಮಾಡಿಕೊಂಡಿದ್ದರು. ದಾನಪ್ಪ ಜಾಗನೂರೆ ಕೆಲ ದಿನಗಳ ಹಿಂದಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದನ್ನು.
ಇನ್ನು ಅಪಘಾತದಲ್ಲಿ ಗಾಯಗೊಂಡ ಆಕಾಶ ಯರಗಟ್ಟಿ ,ಉಮೇಶ ಹಂಜಿ, ಶಿವಾನಂದ ಜಾಗನೂರೆ ,ನಂದೇಶ ಢಂಗಿ ಮಲ್ಲಿಕಾರ್ಜುನ ಸಂಕೇಶ್ವರಿ, ಸುನೀಲ ಲಬ್ಬಿ ಎಂಬಾತರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ದಸರಾ ಸಂಭ್ರಮದಲ್ಲಿದ್ದ ಗ್ರಾಮಸ್ಥರಲ್ಲಿ ಶೋಕ ಮನೆ ಮಾಡಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.