ಸಾರ್ವಜನಿಕರ ತೆರಿಗೆ ಹಣದಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ಖರೀದಿಸಿದ ವಾಕಿಟಾಕಿಗಳನ್ನು ಕೇವಲ ಒಂದು ತಿಂಗಳು ಬಳಕೆ ಬಳಿಕ ನಾಪತ್ತೆಯಾಗಿರುವುದು ಪಾಲಿಯ ಆಡಳಿತ ವ್ಯವಸ್ಥೆಯ ಮೇಲೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು. ಮಹಾನಗರ ನಗರದ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ 15ನೇ ಹಣಕಾಸು ಯೋಜನೆಯಡಿ ಪೊಲೀಸ್ ಇಲಾಖೆಯ ಮಾದರಿಯಲ್ಲಿಯೇ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರ ಮತ್ತು ಸಿಬ್ಬಂದಿ ವಾಕಿಟಾಕಿ ಸೌಲಭ್ಯ ಕಲ್ಪಿಸಿತು. ಇದಕ್ಕಾಗಿ 5 ರಿಂದ 6ಲಕ್ಷ ರೂ.ವರೆಗೆ ವೆಚ್ಚ ಮಾಡಿತ್ತು. ಆದರೆ, ಬಳಕೆಯಾಗಿದ್ದ ಕೇವಲ 30 ದಿನಗಳು ಮಾತ್ರ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರು, ಉಪ ಆಯುಕ್ತರು, ಆರೋಗ್ಯ, ಕಂದಾಯ, ಸರ್ವೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸರ್ಕಾರಿ ಹಾಗೂ ಹೊರಗುತ್ತಿಗೆ ಸಿಬ್ಬಂದಿ ಸೇರಿ ಸುಮಾರು 265 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದೆದೆ ಕಾಯಂ, ಹೊರಗುತ್ತಿಗೆ 1,200ಕ್ಕೂ ಅಧಿಕ ಪೌರಕಾರ್ಮಿಕರು ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇಷ್ಟೊಂದು ದೊಡ್ಡ ಸಿಬ್ಬಂದಿ ವ್ಯವಸ್ಥೆ ಇದ್ದರೂ ಸಾರ್ವಜನಿಕರಿಂದ ಬರುತ್ತಿರುವ ದೂರುಗಳಿಗೆ ತ್ವರಿತ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ 50 ಸಿಬ್ಬಂದಿಗೆ ವಾಕಿಟಾಕಿ ಸೌಲಭ್ಯ ಕಲ್ಪಿಸಿತು.
ಲಕ್ಷಾಂತರ ರೂ.ಖರೀದಿಸಿದ ಉಪಕರಣಗಳನ್ನು ಕೇವಲ ಒಂದು ತಿಂಗಳಷ್ಟೇ ಬಳಸಿ ನಂತರ ಬದಿಗೊತ್ತಿದ್ದರೆ ಅದರ ಹೊಣೆ ಯಾರು? ಬಳಕೆ ಸ್ಥಗಿತಗೊಳಿಸಲು ಕಾರಣವೇನು? ಅವುಗಳನ್ನು ಮತ್ತೆ ಬಳಕೆಗೆ ತರಲು ಕ್ರಮ ಕೈಗೊಳ್ಳಲು ಪಾಲಿಕೆ ಕ್ರಮ ವಹಿಸಿಲ್ಲ. ಜನರ ಸಮಸ್ಯೆ ಪರಿಹಾರಕ್ಕೆ ತಂದ ವಾಕಿಟಾಕಿಯೇ ಈಗ ಸಮಸ್ಯೆಯಾಗಿ ಪರಿಣಮಿಸಿರುವುದು ವಿಪರ್ಯಾಸ. ಯೋಜನೆ ಹೆಸರಿನಲ್ಲಿ ಹಣ ಖರ್ಚು ಮಾಡಿ, ಅನುಷ್ಠಾನದಲ್ಲಿ ಕೈಚೆಲ್ಲುವ ಪರಿಪಾಠಕ್ಕೆ ಕಡಿವಾಣ ಹಾಕಬೇಕಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
.................
ಕೋಟ್ಸ್
ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿ ನಡುವೆ ಸಮನ್ವಯ ಕಾಪಾಡಲು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ ಅನುಷ್ಠಾನಕ್ಕೆ ತಂದಿದ್ದ ವಾಕಿಟಾಕಿ ಸೌಲಭ್ಯ ಸ್ಥಗೀತಗೊಳಿಸಿರುವ ಹಾಗೂ ಸಲಕರಣೆಗಳನ್ನು ಎಲ್ಲಿಡಲಾಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡು ಕ್ರಮ ವಹಿಸಲಾಗುವುದು.
- ಪ್ರೀತಿ ಕಾಮಕರ, ಮೇಯರ್, ಮಹಾನಗರ ಪಾಲಿಕೆ