-
ಬೆಳಗಾವಿ: ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲೇ ಅವ್ಯವಸ್ಥೆ, ಮೂಲಸೌಕರ್ಯಗಳ ಕೊರತೆ ಹಾಗೂ ನಿರ್ವಹಣಾ ಲೋಪಗಳು ಕಂಡು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಆಕ್ರೋಶ ಹೊರ ಹಾಕಿದರು.
ಬೆಳಗಾವಿ ನಗರದ ಎಪಿಎಂಸಿಗೆ ಗುರುವಾರ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ಮಾರುಕಟ್ಟೆಯ ವಾಸ್ತವ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳ ತೂಕದ ಯಂತ್ರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು, ತಾವೇ ತೂಕ ಮಾಡಿಕೊಂಡು ಯಂತ್ರಗಳ ಕಾರ್ಯವೈಖರಿಯನ್ನು ಖಚಿತಪಡಿಸಿಕೊಳ್ಳುವ ಮೂಲಕ ವ್ಯಾಪಾರಿಗಳ ಗಮನ ಸೆಳೆದರು. ತೂಕದಲ್ಲಿ ಮೋಸ ನಡೆಯುತ್ತಿದೆಯೇ ಹಾಗೂ ದಲ್ಲಾಳಿಗಳು ಹೆಚ್ಚಿನ ಕಮಿಷನ್ ಪಡೆಯುತ್ತಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಿದರು.
ರೈತರ ಬೆವರಿನ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ಸಿಗಬೇಕಾದ ಮಾರುಕಟ್ಟೆಯಲ್ಲಿ ತೂಕದ ನಿಖರತೆ ಮತ್ತು ವಹಿವಾಟಿನ ಪಾರದರ್ಶಕತೆ ಅತ್ಯಂತ ಮುಖ್ಯವಾಗಿದ್ದು, ಈ ವಿಚಾರಗಳ ಕುರಿತು ನ್ಯಾಯಮೂರ್ತಿಗಳು ಗಮನ ಹರಿಸಿದರು.
ಮಾರಾಟದ ರಸೀದಿಯೇ ಇಲ್ಲ
ಮಾರುಕಟ್ಟೆಯ ಸಗಟು ತರಕಾರಿ ವ್ಯಾಪಾರಿಗಳು ಮಾರಾಟದ ರಸೀದಿಗಳನ್ನು ನೀಡದಿರುವುದನ್ನು ಗಮನಿಸಿದರು. ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಬೇಕಾದ ವ್ಯಾಪಾರಿಗಳು ರಸೀದಿ ನೀಡದಿರುವುದಕ್ಕೆ ತರಾಟೆಗೆ ತೆಗೆದುಕೊಂಡರು.
ಶುದ್ಧ ಕುಡಿಯುವ ನೀರಿನ ಘಟಕ ಬಂದ್
ರೈತರು, ಹಮಾಲಿಗಳು ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಮುಚ್ಚಿರುವುದು ಪರಿಶೀಲನೆ ವೇಳೆ ಕಂಡುಬಂದಿತು. ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೇ ಸ್ಥಗಿತಗೊಂಡಿತ್ತು.
ಇನ್ನು ಮಾರುಕಟ್ಟೆಯ ಉಪಾಹಾರ ಗೃಹದಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಉಪಾಹಾರ ಗೃಹದ ಅವ್ಯವಸ್ಥೆ ಹಾಗೂ ಕಸದ ವಾತಾವರಣದ ಕುರಿತು ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರು, ಹಮಾಲಿಗಳಿಗೆ ವಿಶ್ರಾಂತಿ ಗೃಹವಿಲ್ಲ
ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತರುವ ರೈತರು ಹಾಗೂ ದುಡಿಮೆಯಲ್ಲಿ ತೊಡಗಿರುವ ಹಮಾಲಿಗಳಿಗೆ ಸಮರ್ಪಕ ವಿಶ್ರಾಂತಿ ಗೃಹದ ವ್ಯವಸ್ಥೆ ಇಲ್ಲದಿರುವುದು ಪರಿಶೀಲನೆ ವೇಳೆ ಗಮನಕ್ಕೆ ಬಂತು. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯ ಕೊರತೆಯ ಬಗ್ಗೆಯೂ ನ್ಯಾಯಮೂರ್ತಿಗಳು ರೈತರು ಮತ್ತು ಹಮಾಲಿಗಳಿಂದ ಮಾಹಿತಿ ಪಡೆದರು.ರೈತರು ಮತ್ತು ಕಾರ್ಮಿಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಬೇಕಾದ ಮಾರುಕಟ್ಟೆಯಲ್ಲೇ ಕನಿಷ್ಠ ಸೌಲಭ್ಯಗಳ ಕೊರತೆ ಎದುರಾಗಿರುವುದು ಆಡಳಿತದ ಕಾರ್ಯವೈಖರಿಯ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿದೆ.
ಉಪನಿಬಂಧಕ ಅರವಿಂದ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಶಿವಕುಮಾರ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ.ಇತರರಿದ್ದರು.