ಶುಲ್ಕ ಸಂಗ್ರಹಕ್ಕೆ ಸೀಮಿತವಾದ ಟೋಲ್
| ಮೂಲ ಸೌಕರ್ಯ ಕಲ್ಪಿಸದೆ ಹಣ ವಸೂಲಿ | ವಾಹನ ಸವಾರರಿಗಿಲ್ಲ ಸೌಲಭ್ಯ
ಆನಂದ ಭಮ್ಮನ್ನವರ ಚಿಕ್ಕೋಡಿ
ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಸರ್ಕಾರ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ವಾಹನ ಸವಾರರಿಂದ ಟೋಲ್ ಮೂಲಕ ಶುಲ್ಕ ವಸೂಲಾತಿ ಮಾಡುತ್ತಿವೆ. ಆದರೆ, ಜಿಲ್ಲೆಯಲ್ಲಿರುವ ೪ ರಾಜ್ಯ ಹೆದ್ದಾರಿ ಟೋಲ್ಗಳಲ್ಲಿ ವಾಹನ ಸವಾರರಿಂದ ಶುಲ್ಕ ವಸೂಲಾತಿ ಮಾತ್ರ ಮಾಡುತ್ತಿದ್ದು, ವಾಹನ ಸವಾರರಿಗೆ ಟೋಲ್ ಬಳಿ ನಿಮಮಾವಳಿ ಪ್ರಕಾರ ಇರಬೇಕಾದ ಯಾವುದೇ ಸೌಲಭ್ಯ ನೀಡದೆ ವಂಚಿಸುತ್ತಿವೆ.
ಬೆಳಗಾವಿ ಜಿಲ್ಲೆಯಲ್ಲಿ ಕೆಶೀಪ್( ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ೨೦೧೬ರಲ್ಲಿ ೧೦೭ ಕಿ.ಮಿ ವ್ಯಾಪ್ತಿಯ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ನಂ.೧೮, ಮತ್ತು ಬಾಗೇವಾಡಿ-ಬೈಲಹೊಂಗಲ-ಸವದತ್ತಿ ೬೩ ಕಿ.ಮಿ ವ್ಯಾಪ್ತಿಯ ರಸ್ತೆ ನಿರ್ಮಿಸಿದ್ದು, ನಂತರ ೨೦೧೭ರಲ್ಲಿ ಚಿಕ್ಕೋಡಿ ತಾಲೂಕಿನ ಚಿಂಚಣಿ, ಕಬ್ಬೂರ ಬಳಿ ಮತ್ತು ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಮತ್ತು ಕರಿಕಟ್ಟಿ ಬಳಿ ಟೋಲ್ ಗೇಟ್ ಅಳವಡಿಸಿ ನಿತ್ಯ ಓಡಾಡುವ ಸಾವಿರಾರೂ ವಾಹನಗಳಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿರುವ ಈ ನಾಲ್ಕು ಟೋಲ್ ಸಂಗ್ರಹ ಮತ್ತು ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಕೆಆರ್ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ) ನಿರ್ವಹಣೆ ಮಾಡುತ್ತಿದ್ದು, ಇದು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದೆ. ಆದರೆ ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿನ ಟೋಲ್ ಸಂಗ್ರಹ ಕೇಂದ್ರದ ಬಳಿ ಯಾವುದೇ ಸೌಕರ್ಯಗಳನ್ನು ನೀಡದೆ ಇರುವುದರಿಂದ ವಾಹನ ಸವಾರು ಪರದಾಡುತ್ತಿದ್ದಾರೆ.
ಪಾಲನೆಯಾಗದ ನಿಯಮಗಳು:
ರಾಜ್ಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್ಗಳಲ್ಲಿ ರಸ್ತೆ ಮಧ್ಯ ವಾಹನ ಕೆಟ್ಟು ನಿಂತರೆ ಬೇಕಾಗುವ ವಾಹನಗಳ ಟೋಯಿಂಗ್ ವ್ಯವಸ್ಥೆ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ , ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ, ಮಾರ್ಷಲ್ ವ್ಯವಸ್ಥೆ, ಅಂಬುಲೇನ್ಸ , ಗಸ್ತು ವಾಹನ, ಸೂಚನಾ ಫಲಕಗಳು ಅಳವಡಿಸುವುದು ಸೇರಿದಂತೆ ಯಾವುದೇ ನಿಯಮಗಳನ್ನು ಟೋಲ್ ಸಂಗ್ರಹ ಗುತ್ತಿಗೆ ಸಂಸ್ಥೆ ಪಾಲಿಸದೆ ಕೇವಲ ಶುಲ್ಕ ಸಂಗ್ರಹಕ್ಕೆ ಸಿಮಿತವಾಗಿವೆ.
ಅವಧಿ ಮುಗಿದ ಗುತ್ತಿಗೆ ಸಂಸ್ಥೆಯಿAದ ಹಣ ಸಂಗ್ರಹ!
ಜಿಲ್ಲೆಯ ಬಾಗೇವಾಡಿ-ಬೈಲಹೊಂಗಲ-ಸವದತ್ತಿ ಮಾರ್ಗದ ೬೩ ಕಿಮಿ ವ್ಯಾಪ್ತಿಯ ರಸ್ತೆಯಲ್ಲಿ ಸಾಣಿಕೋಪ್ಪ ಮತ್ತು ಕರಿಕಟ್ಟಿ ಟೋಲ್ ಸಂಗ್ರಹವನ್ನು ಅಶೋಕ ಬಿಲ್ಡ್ಕಾನ್ ಸಂಸ್ಥೆಗೆ ನೀಡಲಾಗಿದೆ. ಈ ಸಂಸ್ಥೆಯು ಕಳೆದ ೮ ವರ್ಷದಿಂದ ಟೋಲ್ ಸಂಗ್ರಹಣೆ ಮಾಡುತ್ತಿದೆ. ಕಳೆದ ಅಕ್ಟೋಬರ್ನಲ್ಲಿಯೆ ಇದರ ಗುತ್ತಿಗೆ ಅವಧಿಯು ಮುಗಿದಿದ್ದರೂ,ಇನ್ನು ಟೋಲ್ ಸಂಗ್ರಹ ಮಾಡುತ್ತಿದೆ.
---
ಕೋಟ್
ರಾಜ್ಯ ಸರ್ಕಾರ ಮೇಲ್ದರ್ಜೆಗೇರಿಸಿ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಕೇಂದ್ರದ ಮೂಲಕ ಶುಲ್ಕ ಸಂಗ್ರಹಿಸುತ್ತದೆ.ಆದರೆ ಟೋಲ್ ಸಂಗ್ರಹ ಕೇಂದ್ರದ ಬಳಿ ಯಾವುದೇ ಸೌಕರ್ಯ ನೀಡುತ್ತಿಲ್ಲ. ಶೌಚಾಲಯ,ಕುಡಿಯುವ ನೀರು, ಪಾರ್ಕಿಗ್ ವ್ಯವಸ್ಥೆ ಕಲ್ಪಿಸಬೇಕು.
ಮಂಜುನಾಥ ಪಾಟೀಲ
ವಾಹನ ಸವಾರರು, ಕಬ್ಬೂರ
---
ಕೋಟ್-
ಟೋಲ್ ಗೇಟ್ ಬಳಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಟೆಂಡರ್ದಲ್ಲಿರುವ ನಿಮಯಗಳನ್ನು ಪಾಲಿಸಲಾಗುತ್ತಿದೆ. ಸಾಣಿಕೋಪ್ಪ ಮತ್ತು ಕರಿಕಟ್ಟಿ ಟೋಲ್ ಸಂಗ್ರಹ ಗುತ್ತಿಗೆ ಸಂಸ್ಥೆ ಅವಧಿ ಮುಗಿದಿದೆ.ಆದರೂ ಹೊಸ ಟೆಂಡರ್ ಪ್ರಕ್ರೀಯೆ ಮುಗಿಯುವವರೆಗೂ ಈಗಿರುವವರ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ.
ರಿಜ್ವಾನ್ ಅಹ್ಮದ್
ವಿಭಾಗೀಯ ಅಭಿಯಂತರ ಕೆಆರ್ಡಿಸಿಎಲ್, ಹುಬ್ಬಳ್ಳಿ