ಬೆಳಗಾವಿ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮೊಹಮ್ಮದ ರೋಷನ್ ಮಾತನಾಡಿದರು. ಪ್ರಕಾಶ ನಿಕ್ಕಂ, ಕೆ.ರಾಮರಾಜನ್, ನಾರಾಯಣ ಭರಮನಿ ಇತರರಿದ್ದರು. 
ಬೆಳಗಾವಿ

ಜಿಲ್ಲೆಯ ಗಡಿಭಾಗದಲ್ಲಿ ರಾಜ್ಯೋತ್ಸವ ಕಡ್ಡಾಯ

-ಡಿಸಿ ಮೊಹಮ್ಮದ ರೋಷನ್ ಸೂಚನೆ

ಬೆಳಗಾವಿ:ಜಿಲ್ಲೆಯ ಗಡಿ ಭಾಗದಲ್ಲಿರುವ ಶಾಲಾ, ಕಾಲೇಜು, ವಿವಿಧ ಇಲಾಖೆಯ ಕಚೇರಿಗಳು, ಖಾಸಗಿ ಕಂಪನಿಗಳಲ್ಲಿ ರಾಜ್ಯೋತ್ಸವ ಆಚರಣೆ ಕಡ್ಡಾಯವಾಗಿದ್ದು, ಅವತ್ತಿನ ಕಾರ್ಯಕ್ರಮ ಕುರಿತು ಪೋಟೋ ಸಮೇತ ದಾಖಲೆ ಸಲ್ಲಿಸಬೇಕು. ತಪ್ಪಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಎಚ್ಚರಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ಬೆಳಗಾವಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕನ್ನಡ ಪರ ಸಂಘಟನೆಗಳು ಸಹಕಾರ ನೀಡಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಂದು ರೂಪಕ ವಾಹನ ಗುರುತಿಸಿ ನಗದು ಬಹುಮಾನ ನೀಡಲಾಗುವುದು.

ಡಿಸಿಪಿ ನಾರಾಯಣ ಭರಮನಿ ಮಾತನಾಡಿ, ಈ ಬಾರಿ ರಾಜ್ಯೋತ್ಸವದ ಮೆರವಣಿಗೆ ವೀಕ್ಷಣೆ ಮಾಡಲು ಜನರಿಗೆ ಅನುಕೂಲ ಕಲ್ಪಿಸುವ ಹಾಗೂ ಜನದಟ್ಟಣೆ ಮಾಡುವ ಉದ್ದೇಶದಿಂದ ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆಯ ಎರಡು ಬದಿಯಲ್ಲಿ ವೀಕ್ಷಕರ ಗ್ಯಾಲರಿ ಹಾಗೂ ಕನ್ನಡ ಪರ ಸಂಘಟನೆಗಳ ವೇದಿಕೆ ನಿರ್ಮಾಣ ಮಾಡುವುದು ಸೂಕ್ತ.ಈ ವಿಷಯವಾಗಿ ಕನ್ನಡ ಪರ ಸಂಘಟನೆಗಳು ತಮ್ಮ ಅಭಿಪ್ರಾಯ ತಿಳಿಸಿದ ಬಳಿಕವೇ ಮರವಣಿಗೆ ಮಾರ್ಗ ಅಂತಿಮಗೊಳಿಸಲಾಗುವುದು. ಮೆರವಣಿಗೆ ಸಮಯ ನಿಗದಿ ಮಾಡುವುದಿಲ್ಲ. ಎರಡು ದಿನ ಆಚರಣೆ ಮಾಡಿದರೂ ಭದ್ರತೆ ಕೊಡಲು ನಾವು ಸಿದ್ಧರಿದ್ದೇವೆ ಎಂದು ವಿವರಿಸಿದರು.

ಕನ್ನಡ ಪರ ಸಂಘಟನೆಗಳ ಮುಖಂಡರು ಮಾತನಾಡಿ, ಮಹಾನಗರದಲ್ಲಿ ರಾಜ್ಯೋತ್ಸವ ಮೆರವಣಿಗೆ ಬದಲಾವಣೆ ಮಾಡುವುದು ಬೇಡ. ಹಿರಿಯರು ಮಾಡಿರುವ ಮಾರ್ಗದಲ್ಲಿಯೇ ಮೆರವಣಿಗೆ ಮುಂದುವರಿಯಲಿ. ಕನ್ನಡೇತರ ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಿ ಎಲ್ಲ ಕಡೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ, ಎಸ್‌ಪಿ ಕೆ.ರಾಮರಾಜನ್, ಅಪರ ಜಿಲ್ಲಾಧಿಕಾರಿ ಡಾ. ವಿಜಯಕುಮಾರ ಹೊನಕೇರಿ, ಜಿಪಂ ಯೋಜನಾ ನಿರ್ದೇಶಕ ಬಂಗಾರೆಪನ್ನವರ, ಅಶೋಕ ಚಂದರಗಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ್, ರಮೇಶ ಸೊಂಟಕ್ಕಿ ಇತರರಿದ್ದರು.

...........................

ಬಾಕ್ಸ್

ಮೇಯರ, ಉಪಮೇಯರ್‌ಗೆ ಅವಮಾನ

ಮಹಾನಗರ ಪಾಲಿಕೆಯ ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹನುಮಂತ ಕೊಂಗಾಲ, ಸದಸ್ಯರು ಕನ್ನಡ ಪರ ನಿಲುವು ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ, ಕನ್ನಡ ವಿರೋಧಿ ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಬಾರದು. ಅವರೆಲ್ಲಾ ನಾಡದ್ರೋಹಿಗಳು ಎಂದು ಗಡಿನಾಡು ಕನ್ನಡಿಗರ ಸೇನೆ ಅಧ್ಯಕ್ಷ ಬಲರಾಮ ಮಾಸೇನಟ್ಟಿ , ವಾಜೀದ ಹಿರೇಕೋಡಿ ಘೋಷಣೆ ಕೂಗಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಕೆಲ ಕನ್ನಡ ಪರ ಸಂಘಟನೆಗಳ ಮುಖಂಡರು ನಗರದ ಪ್ರಥಮ ಪ್ರಜೆಯಾಗಿದ್ದು, ಅವರಿಗೆಲ್ಲಾ ಗೌರವ ಕೊಡುವುದನ್ನು ಕಲಿಯಿರಿ. ಅವಮಾನಿಸುವ ಕೆಲಸ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದಾಗಿ ಸಭೆಯಲ್ಲಿ ಅರ್ಧಗಂಟೆಗೆ ಪರಸ್ಪರ ವಾಗ್ವಾದ ನಡೆಯಿತು. ಕೊನೆಗೆ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥ ಪಡಿಸಿದರು.

.....................................

ಬಾಕ್ಸ್

ಕರಾಳ ದಿನ ಆಚರಣೆಗೆ ಅವಕಾಶ ಇಲ್ಲ

ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಣೆಗೆ ಅವಕಾಶ ಕೊಟ್ಟಿಲ್ಲ. ಈ ಬಾರಿಯೂ ಅನುಮತಿ ನೀಡುವುದಿಲ್ಲ. ನಿಯಮ ಉಲ್ಲಂಘಿಸಿ ಆಚರಣೆ ಮಾಡಿರುವ ಮೇಲೆ ಸಾಕಷ್ಟು ಕೇಸ್‌ಗಳನ್ನು ದಾಖಲಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಪೂರ್ಣ ಶಕ್ತಿ ಕಳೆದುಕೊಂಡಿದೆ. ಅಸ್ತಿತ್ವ ಉಳಿಸಿಕೊಳ್ಳಲು ಅಲ್ಲಲ್ಲಿ ಹೋರಾಟ ಮಾಡುತ್ತಿದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಹೇಳಿದರು.

..........................

ಬಾಕ್ಸ್

ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳು

*ಬೆಳಗಾವಿ ನಗರದ ಚೆನ್ನಮ್ಮ ಪ್ರತಿಮೆಯನ್ನು ನೆಲದಿಂದ 30 ಅಡಿಯಷ್ಟು ಎತ್ತರಿಸಬೇಕು.

*ಸುವರ್ಣ ವಿಧಾನಸೌಧ ಮುಂಭಾಗದಲ್ಲಿ 108 ಅಡಿ ಎತ್ತರದ ಭುವನೇಶ್ವರಿ ಕಂಚಿನ ಮೂರ್ತಿ ನಿರ್ಮಾಣ

*ಇಮ್ಮಡಿ ಪುಲಕೇಶಿ ಇತಿಹಾಸ ಸಾರುವ ರೂಪಕ ವಾಹನ ಸಿದ್ದಪಡಿಸಿ

* ಅತ್ಯುತ್ತಮ ರೂಪಕ ವಾಹನಗಳ ನಗದು ಬಹುಮಾನ 50 ಸಾವಿರ ರೂ. ಹೆಚ್ಚಳ ಮಾಡಿ

*ರಾಜ್ಯೋತ್ಸವದಲ್ಲಿ ಭಾಗವಹಿಸುವವರಿಗಾಗಿ ಹೋಳಿಗೆ ಊಟದ ವ್ಯವಸ್ಥೆ ಮಾಡಲು ಎಲ್ಲ ಮಠಾಧೀಶರಿಗೆ ಪ್ರಸ್ತಾವನೆ

* ಈ ಬಾರಿ ರಾಜ್ಯೋತ್ಸವಕ್ಕೆ 5 ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

* ಎಂಇಎಸ್ ಮುಖಂಡರನ್ನು ಗಡಿಪಾರು ಮಾಡಲು ಒತ್ತಾಯ

.............