ಬೆಳಗಾವಿ : ಬಾಕಿ ಗೌರವಧನ ಹಾಗೂ ಪ್ರೋತ್ಸಾಹಧನ ಜಮೆ ಮಾಡಬೇಕು ಎಂಬುದು ಸೇರದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ಮೈದಾನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿದರು.
ಸಮಸ್ತ ಆ್ಯಪ್ ಕೆಲಸಕ್ಕೆ ಸರ್ಕಾರ ಸಮರ್ಪಕ ಮೊಬೈಲ್ ಅಥವಾ ಟ್ಯಾಬ್ಲೆಟ್ ನೀಡಿಲ್ಲ. ಸ್ವಂತ ಮೊಬೈಲ್ ಬಳಕೆಗೆ ನೀಡುತ್ತಿದ್ದ ಮಾಸಿಕ 280ರೂ. ಬಾಡಿಗೆ ಸಹ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಸ್ವಂತ ಖರ್ಚು ಹಾಕಿಕೊಂಡು ಕೆಲಸ ನಿರ್ವಹಿಸುವ ಅನಿವಾರ್ಯತೆ ಬಂದಿದೆ. ಹೀಗಾಗಿ, ಆ್ಯಪ್‌ನಲ್ಲಿ ಮಾಹಿತಿ ದಾಖಲೀಕರಣಕ್ಕೆ ಪ್ರತ್ಯೇಕ ಪ್ರೋತ್ಸಾಹಧನ ನಿಗದಿಪಡಿಸಬೇಕು. ಸ್ಮಾರ್ಟ್‌ಫೋನ್ ಹಾಗೂ ಆ್ಯಪ್ ಬಳಕೆ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ತಾಂತ್ರಿಕ ಸಮಸ್ಯೆಗಳಿಂದ ಈಗಾಗಲೇ ದಾಖಲಿಸಿರುವ ಮಾಹಿತಿ ಸರಿಯಾಗಿ ಸೇವ್ ಆಗಿಲ್ಲ. ಇದರಿಂದ ಅನೇಕರಿಗೆ ಕೆಲಸ ಮಾಡಿದರೂ ಪ್ರ್ರೋತ್ಸಾಹಧನ ಸಿಕ್ಕಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಎಲ್ಲ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಟಿಬಿ, ಟಿಬಿಐ, ಎನ್‌ಸಿಡಿ ಸೇರಿದಂತೆ ವಿವಿಧ ವಿಭಾಗಗಳ ಹಲವು ವರ್ಷಗಳಿಂದ ಬಾಕಿ ಇರುವ ಪ್ರೋತ್ಸಾಹಧನ ಪಾವತಿಸಬೇಕು. ಪ್ರತಿ ತಿಂಗಳು ಪಾವತಿ ವಿವರ, ಮಂಜೂರಿ ಪ್ರತಿ ನೀಡಬೇಕು. ಅನಗತ್ಯವಾಗಿ ಹೆಚ್ಚುವರಿ ಕೆಲಸದ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಕೆಲಸ ತೊರೆದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು.
ಲಕ್ಷ್ಮಣ ಜಡಗನ್ನವರ, ಸಜಾತಾ ಕಾಡಮಠ, ರೂಪಾ ಅಂಗಡಿ, ಗೀತಾ ರಾಯಗೋಳ, ಬಾಯಮ್ಮ ಕಮ್ಮಾರ ಇತರರಿದ್ದರು.