ಗಡಿಭಾಗದಲ್ಲೊಂದು ಮಾದರಿ ಶಾಲೆ
| ವರ್ಷದಿಂದ ವರ್ಷಕ್ಕೆ ದಾಖಲಾತಿ ಹೆಚ್ಚಳ | ಅಭಿವೃದ್ಧಿಗೆ ಹಲವರ ಸಹಾಯ ಹಸ್ತ
ವಿಜಯವಾಣಿ ವಿಶೇಷ ಚಿಕ್ಕೋಡಿ
ಸರ್ಕಾರಿ ಶಾಲೆಗಳಿಗೆ ಎಷ್ಟೇ ಸೌಲಭ್ಯ, ಸವಲತ್ತುಗಳನ್ನು ನೀಡಿದರೂ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿವ ತಾತ್ಸರ ಭಾವನೆ ಬದಲಾಗುತ್ತಿಲ್ಲ, ಖಾಸಗಿ ಶಾಲೆಗಳ ಬಗ್ಗೆಯೇ ಒಲವು ಹೆಚ್ಚುತ್ತಿರುವುದರ ನಡುವೇಯೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಸರ್ಕಾರಿ ಶಾಲೆ ಗಡಿಭಾಗದಲ್ಲಿ ಗಮನ ಸೆಳೆಯುತ್ತಿದೆ.
ಕಳೆದ ೧೦ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಕುಸಿಯುತ್ತಿರುವುದರ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪ್ಪುತ್ತಿವೆ. ಆದರೆ ಖಡಕಲಾಟ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಹಲವು ಮೂಲಭೂತ ಸೌಕರ್ಯ ಹೋಂದುವ ಮೂಲಕ ಶಾಲೆಯ ದಾಖಲಾತಿಯು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಂಡು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.
೧೯೫೬ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ೯ನೇ ತರಗತಿಯಿದ್ದು, ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು ೭೪೬ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟು ೨೨ ಕೊಠಡಿಗಳಿದ್ದು, ೧೮ ಜನ ಸಹ ಶಿಕ್ಷಕರು, ೭ ಜನ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಲವರ ಸಹಾಯ ಹಸ್ತ:
ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ ಗೌನವರ ಸ್ವಂತ ಖರ್ಚಿನಲ್ಲಿ ೧ಲಕ್ಷ ರೂ.ವೆಚ್ಚದಲ್ಲಿ ಎರಡು ಸ್ಮಾರ್ಟ್ ಟಿವಿ ಕೊಡುಗೆಯಾಗಿ ನೀಡಿದ್ದಾರೆ. ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ಒಟ್ಟು ೧೦ ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಶಾಲೆಯ ಪ್ರತಿ ತರಗತಿಗೆ ಸ್ಮಾರ್ಟ್ ಟಿವಿ ಅಳವಡಿಸಲಾಗಿದೆ.ಹಾಗೂ ೨೫ ಕಂಪೂಟರ್ ಒಳಗೊಂಡ ಲ್ಯಾಬ್ ತೆರೆಯಲಾಗಿದೆ. ಡಿಜಿಟಲ್ ಬೋರ್ಡ್ ಹಾಗೂ ಪ್ರೊಜೆಕ್ಟರ್ ಸೌಲಭ್ಯ ಒದಗಿಸಲಾಗಿದೆ.
ಹಸಿರಿನಿಂದ ಕಂಗೋಳಿಸುವ ವಾತಾವರಣ:
ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದ್ದರ ಪರಿಣಾಮ ಆವರಣವು ಹಸಿರಿನಿಂದ ಕಂಗೋಳಿಸುತ್ತಿದೆ.ಜತೆಗೆ ಪಕ್ಷಿಗಳ ಕಲರವ ಕಿವಿಗೆ ಇಂಪು ನೀಡುತ್ತದೆ.ಮಕ್ಕಳಿಕೆ ಪರಿಣಾಮಕಾರಿ ಕಲಿಕೆಗೆ ಇಲ್ಲಿ ಪೂರಕವಾದ ವಾತಾವರಣ ನಿರ್ಮಾಣವಾಗುವ ಮೂಲಕ ಮಾದರಿ ಶಾಲೆಯಾಗಿದೆ.
ಕೋಟ್
ಸ್ಥಳೀಯರ ಸಹಕಾರ ಶಾಲೆಯ ಪ್ರಗತಿಗೆ ಕಾರಣವಾಗಿದೆ.ಶಾಲೆಯಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ. ಮುಂದಿನ ವರ್ಷ ದಾಖಲಾತಿ ಪ್ರಮಾಣ ಒಂದು ಸಾವಿರ ದಾಟುವ ವಿಶ್ವಾಸವಿದೆ.
ರಾಜಕುಮಾರ ಗೌನವರ,
ಮುಖ್ಯ ಶಿಕ್ಷಕ,ಖಡಕಲಾಟ ಶಾಲೆ