ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
| ಸಿಎಲïಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ಮಾಹಿತಿ | ಸುದ್ದಿಗೋಷ್ಠಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಅನುದಾನಿತ ಶಾಲಾ ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ, ನ.೧೭ಮತ್ತು ೧೮ರಂದು ಧಾರವಾಡದ ಜುಬ್ಲಿ ಸರ್ಕಲ್ ಬಳಿ ಕಡಪ ಮೈದಾನದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಎಲ್ಇ ಸಂಸ್ಥೆಯ ಕಾರ್ಯದರ್ಶಿ ಜಗದೀಶ ಕವಟಗಿಮಠ ತಿಳಿಸಿದರು.
ಪಟ್ಟಣದ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಹೋರಾಟದ ಪೂರ್ವಭಾವಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ಹುಬ್ಬಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ನೌಕರರ ಹೋರಾಟ ಸಮನ್ವಯ ಸಮಿತಿ,ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ವಿವಿಧ ಮಠಾಧೀಶರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಿಕ್ಷಕರು ಬೆಂಬಲ ನೀಡಿದ್ದಾರೆ ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬೆಂಬಲ ಸೂಚಿಸಿವೆ. ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಅಥಣಿ ರಾಯಬಾಗ ಹಾಗೂ ಕಾಗವಾಡ ಸೇರಿ ಚಿಕ್ಕೋಡಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು, ಪದಾಧಿಕಾರಿಗಳು, ಶಿಕ್ಷಕರು ಸೇರಿ ಸುಮಾರು ೨೫೦೦ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲಿದಾರೆ ಎಂದು ಹೇಳಿದರು.
ಪ್ರಮುಖ ಬೇಡಿಕೆಗಳಾದ ಹಳೆ ಪಿಂಚಣಿ ಸೌಲಭ್ಯ ಜಾರಿ, ಶಾಲಾ-ಕಾಲೇಜುಗಳ ಮಾನ್ಯತೆ ನವೀಕರಣ ಸರಳೀಕರಣ, ಅನುದಾನಿತ ಶಾಲಾ ಕಾಲೇಜುಗಳ ಖಾಲಿ ಹುದ್ದೆ ಭರ್ತಿ ಮಾಡುವುದು, ಪಿಟಿಆರ್ ಸಮಸ್ಯೆಗೆ ಪರಿಹಾರ ಹಾಗೂ ತೃತಿಯ ಭಾಷೆ ರದ್ಧತಿ ಆದೇಶ ಹಿಂಪಡೆಯುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ವ್ಹಿ.ಎಸ್.ಎಂ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ, ಯಕ್ಸಂಬಾ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಕರಾಳೆ,ಬಸವರಾಜ ತಳವಾರ,ಎಂ.ಜಿ. ಚಿಕ್ಕಮಠ, ಮಹಾದೇವ ಬರಗಾಲೆ,ಎಸ್.ಐ.ಸಂಬಾಳ,ಎಸ್.ಎಸ್.ಅಂಗಡಿ ಇತರರಿದ್ದರು.
---