ಬೆಳಗಾವಿ: ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನ.4ರಂದು ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇ ಪ್ರಸಕ್ತ ಹಂಗಾಮಿನ ಅಧಿಕೃತ ದರಗಳಾಗಿವೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ದರವನ್ನು ಅಂತಿಮಗೊಳಿಸಿಲ್ಲ. ಹೀಗಾಗಿ ಕಬ್ಬು ಬೆಳೆಗಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಳೆದ ಹಂಗಾಮಿಗಿಂತ ಪ್ರತಿ ಟನ್ಗೆ ₹350 ಹೆಚ್ಚುವರಿಯಾಗಿ ಪಾವತಿಸಲು ಒಪ್ಪಿಕೊಂಡಿವೆ. ಅದರಂತೆ ಮೊದಲ ಕಂತಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3,500 ಪಾವತಿಸಲಾಗುವುದು. ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ₹100 ನೀಡಲು ನಿರ್ಧರಿಸಲಾಗಿದೆ. ಮೂರನೇ ಹಾಗೂ ಅಂತಿಮ ಕಂತಿನ ಹಣವನ್ನು ಹೊಸ ಹಂಗಾಮು ಆರಂಭವಾಗುವ ಮುನ್ನ, ಸರಾಸರಿ ಸಕ್ಕರೆ ಮಾರಾಟ ದರ ಪ್ರತಿ ಕೆಜಿಗೆ ₹45ಕ್ಕಿಂತ ಹೆಚ್ಚಿರುವ ಆಧಾರದ ಮೇಲೆ ಪಾವತಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ನಷ್ಟವಾಗುವುದನ್ನು ತಪ್ಪಿಸಲು ಕಾರ್ಖಾನೆಗಳು ಕೂಡಲೇ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು ಎಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕಬ್ಬಿನ ದರದ ಕುರಿತು ಅನಗತ್ಯ ಗೊಂದಲಗಳಿಗೆ ಕಿವಿಗೊಡದೆ, ಜಿಲ್ಲಾಡಳಿತ ಮತ್ತು ಕಾರ್ಖಾನೆಗಳ ಸಭೆಯಲ್ಲಿ ಅಂತಿಮಗೊಂಡ ನಿರ್ಣಯದಂತೆ ಕಬ್ಬು ಕಟಾವು ಹಾಗೂ ಪೂರೈಕೆಗೆ ರೈತರು ಸಹಕರಿಸಬೇಕು. ಕಬ್ಬಿನ ದರ ಗೊಂದಲ ಸೃಷ್ಟಿಸುವ, ಬೆಳೆಗಾರರ ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡಬಾರದು. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಕಟಿಸಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
......
ಕಾರ್ಖಾನೆಗಳಿಂದ ರೈತರಿಗೆ ಮನವಿ
ನಿಗದಿತ ದರದಂತೆ ಮೂರು ಕಂತುಗಳಲ್ಲಿ ಹಣ ಪಾವತಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನ.4ರಂದು ನಡೆದ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಿರುವ ನಿರ್ಣಯದಂತೆ ಕಬ್ಬಿನ ಬಿಲ್ ಪಾವತಿಸಲಾಗುವುದು. ಮೊದಲ ಕಂತಿನಲ್ಲಿ ಪ್ರತಿ ಟನ್ಗೆ ₹3,500, ಹಂಗಾಮು ಮುಕ್ತಾಯದ ಬಳಿಕ ಎರಡನೇ ಕಂತಿನಲ್ಲಿ ₹100 ಹಾಗೂ ಹೊಸ ಹಂಗಾಮು ಆರಂಭಕ್ಕೂ ಮುನ್ನ ಸರಾಸರಿ ಸಕ್ಕರೆ ದರ ಕೆಜಿಗೆ ₹45ಕ್ಕಿಂತ ಹೆಚ್ಚಿರುವ ಆಧಾರದ ಮೇಲೆ ಮೂರನೇ ಹಾಗೂ ಅಂತಿಮ ಕಂತಿನ ಹಣ ಪಾವತಿಸಲಾಗುವುದು. ಆದ್ದರಿಂದ ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ ಕಬ್ಬು ಕಟಾವು ಆರಂಭಿಸಿ ಕಾರ್ಖಾನೆಗಳಿಗೆ ಪೂರೈಸಬೇಕು ಎಂದು ಸಕ್ಕರೆ ಕಾರ್ಖಾನೆಗಳ ಮನವಿ.